ಮಂಗಳೂರಿನ ೧೫ ಕಡೆಗಳಲ್ಲಿ ಹಾರ್ನ್ರ್ನ್ ಫ್ರೀ ಜೋನ್ನ್- ಕಮಿಷನರ್ರ್ ಅನುಪಮ್ಮ್
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಲೇಡಿಗೋಷನ್, ವೆನ್ಲಾಕ್ ಸೇರಿದಂತೆ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ವಲಯ, ವಸತಿ ಪ್ರದೇಶ ಸೇರಿದಂತೆ ನಾನಾ ಕಡೆ ಪರಿಶೀಲನೆ ನಡೆಸಿ 15 ಕಡೆಗಳಲ್ಲಿ ‘ಹಾರ್ನ್ ಫ್ರೀ ಝೋನ್’ ಆಗಿ ಘೋಷಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ.
ನಗರದ ಕಮಿಷನರ್ ಕಚೇರಿಯಲ್ಲಿ ಶನಿವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರಿಂದ ಕರ್ಕಶ ಹಾರ್ನ್‌ಗಳ ಬಗ್ಗೆ ಬಂದ ದೂರಿಗೆ ಸ್ಪಂದಿಸಿ ಅವರು ಮಾತನಾಡಿದರು.
ಹಂಪನಕಟ್ಟೆಯ ಲೇಡಿಗೋಷನ್ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ‘ಹಾರ್ನ್ ಫ್ರೀ ಝೋನ್’ ಜಾರಿ ಮಾಡಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ನಗರದಲ್ಲಿ ಅನಗತ್ಯವಾಗಿ ಕರ್ಕಶವಾಗಿ ಹಾರ್ನ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಕೆಲವೊಂದು ಪ್ರದೇಶಗಳನ್ನು ಆಯ್ಕೆ ಮಾಡಿ ಅಗತ್ಯತೆ ಹಿನ್ನೆಲೆಯಲ್ಲಿ ಹಾರ್ನ್ ಫ್ರೀ ಝೋನ್ ವಲಯ ಎಂದು ಘೋಷಿಸಲಾಗುವುದು ಎಂದರು.
ಫುಟ್‌ಪಾತ್ ವ್ಯಾಪಾರಕ್ಕೆ ಲಗಾಮು:
ನಗರದಲ್ಲಿ ಫುಟ್‌ಪಾತ್ ವ್ಯಾಪಾರ ಹಾಗೂ ಅನಧಿಕೃತ ಪಾರ್ಕಿಂಗ್ ನಿಯಂತ್ರಿಸದಿದ್ದರೆ ಮತ್ತಷ್ಟು ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಎದುರಾಗಲಿದೆ. ಸ್ಥಳೀಯ ಸಂಸ್ಥೆಗಳು ಇದರ ವಿರುದ್ಧ ಕ್ರಮಕೈಗೊಳ್ಳಬೇಕು. ಆದರೆ ಇದು ಪರಿಣಾಮಕಾರಿಯಾಗಿ ಜಾರಿಯಾಗದೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ. 15 ದಿನದೊಳಗೆ ಲೇಡಿಗೋಷನ್ ವ್ಯಾಪ್ತಿಯ ಫುಟ್‌ಪಾತ್ ವ್ಯಾಪಾರವನ್ನು ಸಂಪೂರ್ಣವಾಗಿ ತೆರವು ಮಾಡಲಾಗುವುದು. ಉಳಿದೆಡೆಯೂ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಪೊಲೀಸ್ ಕಮಿಷನ್ ನಾಗರಿಕರ ದೂರಿಗೆ ಉತ್ತರಿಸಿದರು.
ಹಾಲಿಡೇ ಪ್ಯಾಕೇಜ್ ವಂಚನೆ:
ನಗರದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಕೆಲವೊಂದು ಏಜೆನ್ಸಿಗಳು ಹಾಲಿ ಡೇ ಪ್ಯಾಕೇಜ್ ಎಂದು ಸದಸ್ಯತ್ವ ಮಾಡಿ ಹಣ ವಂಚನೆ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕದ್ರಿಯ ನಾಗರಿಕರೊಬ್ಬರು ಆಗ್ರಹಿಸಿದರು.
ಇದಕ್ಕೆ ಕಮಿಷನರ್ ಉತ್ತರಿಸಿ, ಈ ರೀತಿಯ ಹೊಟೇಲ್‌ಗಳನ್ನು ಪತ್ತೆಹಚ್ಚಿ ಅವರಿಗೆ ಖಡಕ್ ಸೂಚನೆ ನೀಡಬೇಕು ಎಂದರು.
ನಗರದ ಹಲವೆಡೆ ಬಸ್ ತಂಗುದಾಣದಲ್ಲಿ ಬಸ್‌ಗಳನ್ನು ನಿಲ್ಲಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೂಡಲೇ ಸ್ಪಂದಿಸಿದ ಕಮಿಷನರ್ ಅವರು, ಸಂಬಂಧಪಟ್ಟ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು.
ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣದಲ್ಲಿರುವ ರಿಕ್ಷಾ ಚಾಲಕರು ಪ್ರೀಪೇಯ್ಡ್‌ಗಿಂತ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಕಮಿಷನರ್ ಅವರು ಸಂಚಾರಿ ಪೊಲೀಸರಿಗೆ ಸೂಚಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಎಸಿಪಿಗಳಾದ ಪರಮೇಶ್ವರ ಹೆಗಡೆ, ಮಹೇಶ್ ಕುಮಾರ್, ಮನೋಜ್ ಕುಮಾರ್, ರವೀಶ್ ನಾಯಕ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.