ಶಿವಮೊಗ್ಗ: ನಗರದ ಪ್ರತಿಷ್ಠಿತ ಕರ್ನಾಟಕ ಸಂಘ ಭವನದಲ್ಲಿ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಘದ 94ನೇ ವಾರ್ಷಿಕೋತ್ಸವ ನಿಮಿತ್ತ ನ.22 ಮತ್ತು 23ರಂದು ಸಂಜೆ 5.30 ರಿಂದ ರಾತ್ರಿ 9 ರವರೆಗೆ ಪ್ರಖ್ಯಾತ ವೈದ್ಯರು, ವನ್ಯಜೀವಿ ಛಾಯಾಚಿತ್ರ ಗ್ರಾಹಕರೂ ಆದ ಡಾ.ಶ್ರೀಕಾಂತ್ ಹೆಗಡೆ ಅವರ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಅವರ ಅಪೂರ್ವ ರಾಜ ಮಹಾರಾಜರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು, ಭಾರತದ ರಾಜಪ್ರಭುತ್ವ ರಾಜರ ಅಂಚೆ ಚೀಟಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನ.22ರಂದು ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಂಜೆ 6.30ಕ್ಕೆ ಆಧುನಿಕ ಕನ್ನಡ ಗದ್ಯ ಬರವಣಿಗೆಯ ಹೆಜ್ಜೆಗಳು ವಿಷಯ ಕುರಿತು ಡಾ.ಜನಾರ್ದನ ಭಟ್‌ರಿಂದ ಉಪನ್ಯಾಸ ನಡೆಯಲಿದೆ. ನ.23ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದ 94ನೇ ವಾರ್ಷಿಕೋತ್ಸವ ಜರುಗಲಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಡಾ.ಶ್ರೀಕಾಂತ್ ಎನ್.ಹೆಗಡೆ ಅವರು ಕಳೆದ 15 ವರ್ಷಗಳಿಂದ ವನ್ಯಜೀವಿಗಳ ಫೋಟೋಗ್ರಫಿ ಯಲ್ಲಿ ತೊಡಗಿದ್ದು, ಇದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ಅಪರೂಪದ ಪಕ್ಷಿಗಳನ್ನು ಇವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವನ್ಯಜೀವಿ ಪಕ್ಷಿಗಳ ಛಾಯಾಚಿತ್ರ ವೀಕ್ಷಿಸಲು ಇದೊಂದು ಸದವಕಾಶ ವಾಗಿದೆ.
ಎಸ್.ಚಂದ್ರಕಾಂತ್ ಅವರು ಕಳೆದ 50 ವರ್ಷಗಳಿಂದ ಸಂಗ್ರಹಿಸಿರುವ ಕುಶಾನರು, ಗುಪ್ತರು, ಕ್ಷತ್ರಪರು, ವಿಜಯನಗರ, ಮೈಸೂರು, ಶಾತವಾಹನರು, ಬನವಾಸಿಯ ಚುಟು ವಂಶಸ್ಥರು, ಚಾಣಕ್ಯರ ಮಾರ್ಗದರ್ಶನದಲ್ಲಿ ಮೌರ್ಯರ ಆಡಳಿತದಲ್ಲಿ ಬಳಕೆಗೆ ಬಂದ ಬೆಳ್ಳಿಯ ಪಂಚ್‌ಮಾರ್ಕ್ ನಾಣ್ಯಗಳು ಹೀಗೆ ರಾಜ-ಮಹಾರಾಜರ ಕಾಲದ ನಾಣ್ಯಗಳು ಹಾಗೂ ಬಳಸುತ್ತಿದ್ದ ವಿಶೇಷ ಅಂಚೆ ಚೀಟಿಗಳು ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.ಬ್ರಿಟೀಷರ ಕಾಲದಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿ ನಾಣ್ಯಗಳು, ಕಾಸು, ಬಿಲ್ಲೆ, ಅರ್ಧಾಣೆ, ಒಂದಾಣೆ, ನಾಲ್ಕಾಣೆ, ಎಂಟಾಣೆ ನಾಣ್ಯಗಳೂ ಸೇರಿದಂತೆ ಅಪರೂಪದ ನಾಣ್ಯಗಳ ಪ್ರದರ್ಶನ ಸಹ ಇದ್ದು ಶಿವಮೊಗ್ಗ ಜನತೆ ಕರ್ನಾಟಕ ಸಂಘ ಭವನದಲ್ಲಿ ವೀಕ್ಷಿಸುವಂತೆ ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಉಪಾಧ್ಯಕ್ಷ ಮೋಹನ ಶಾಸ್ತ್ರಿ, ಕಾರ್ಯದರ್ಶಿ ವಿನಯ್ ಕೋರಿದ್ದಾರೆ.