
ಮಡಿಕೇರಿ: 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷದಂತೆ ಜೂ. 21ರಂದು ಆಯುಷ್ ಮಂತ್ರಾಲಯ, ಭಾರತ ಸರ್ಕಾರ, ಆಯುಷ್ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಂಗಳವಾರ ಕೊಡಗು ಜಿಲ್ಲಾಡಳಿತ, ಜಿ.ಪಂ., ಆಯುಷ್ ಇಲಾಖೆ, ಕೊಡಗು ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ, ಯೋಗ ಒಕ್ಕೂಟ, ಮಡಿಕೇರಿ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಿಂದ ಹಳೆಯ ಖಾಸಗಿ ಬಸ್ ನಿಲ್ದಾಣ ಮೂಲಕ ಗಾಂಧಿ ಮೈದಾನದವರೆಗೆ ಜಾಥಾ ನಡೆಯಿತು. ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಶ್ರೀನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶೈಲಜಾ ಜಿ., ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ರಾಮಚಂದ್ರ ಕಾಮತ್, ಶಾಲಾ ಶಿಕ್ಷಣ ಇಲಾಖೆಯ ಡಿ.ಪಿ.ಓ ಶ್ರೀನಿವಾಸ, ಸೌಟ್ಸ್ ಮತ್ತು ಗೈಡ್ಸ್‌ನ ಮುಖ್ಯಸ್ಥರಾದ ಬೇಬಿ ಮ್ಯಾಥ್ಯೂ, ಯೋಗ ಒಕ್ಕೂಟದ ಮಹೇಶ್ ಕುಮಾರ್, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ವೈದ್ಯಾಧಿಕಾರಿ ಡಾ. ಅರುಣ್ ಪಿ.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 400 ಜನ ಭಾಗವಹಿಸಿದ್ದರು. ನಗರ ಪೊಲೀಸ್ ಠಾಣೆ ಬಳಿ ಯೋಗ ಪ್ರದರ್ಶನ ನಡೆಯಿತು.
ಯೋಗಾಭ್ಯಾಸದಿಂದ ದೈಹಿಕ ಆರೋಗ್ಯ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಚೆನ್ನಾಗಿರಲಿದೆ. ಜೀವನ ಶೈಲಿ ಸುಧಾರಣೆಯಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಅಭಿಪ್ರಾಯಪಟ್ಟರು.