ಹೂವಿನಹಡಗಲಿ; ಹದಿ ಹರೆಯದ ವಯಸ್ಸಿನ ವಿದ್ಯಾರ್ಥಿನಿಯರು ತಮ್ಮ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಜ್ಞ ವೈದ್ಯೆ ಡಾ.ಶ್ರುತಿ ಟಿ. ಹೇಳಿದರು.
ಹದಿ ವಯಸ್ಸು ಎಷ್ಟು ಸುಂದರವೋ ಅಷ್ಟೇ ನಾಜೂಕಾದ ವಯಸ್ಸಾಗಿದೆ. ಈ ಹಂತದಲ್ಲಿ ಹುಡುಗಿಯರಿಗೆ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಈ ಎಲ್ಲ ಬದಲಾವಣೆಗಳ ಬಗ್ಗೆ ನಮಗೆ ಸೂಕ್ತ ಜ್ಞಾನ ಇದ್ದಾಗ ಮಾತ್ರ ನಾವು ಆರೋಗ್ಯವಾಗಿ ಇರಲು ಸಾಧ್ಯ ಎಂದರು.
ನಮ್ಮ ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ನಾವು ಸೃಷ್ಟಿ ಮಾಡಬೇಕಿದೆ. ಆ ಮೂಲಕ ಎಲ್ಲ ತರಹದ ಭಯ, ಹಿಂಜರಿಕೆಗಳನ್ನು ದೂರ ಮಾಡಬೇಕಿದೆ. ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಲೇಜಿಗೆ ಇರುವ ಕಾಳಜಿಯನ್ನು ಶ್ಲಾಘಿಸಿದರು. ಎಲ್ಲ ಕಾಲೇಜಿಗಳಲ್ಲಿ ಈ ತರಹದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ ಎಂದರು.ಆಪ್ತ ಸಮಾಲೋಚನೆಯಲ್ಲಿ ವಿದ್ಯಾರ್ಥಿನಿಯರು ಮುಕ್ತವಾಗಿ ಪ್ರಶ್ನೆಗಳನ್ನು ಕೇಳಿ ತಮ್ಮ ಸಮಸ್ಯೆ ಹಾಗೂ ಗೊಂದಲಗಳನ್ನು ಪರಿಹರಿಸಿಕೊಂಡರು.
ಪ್ರಾಚಾರ್ಯ ಬಿ.ಸಣ್ಣನೀಲಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುಮಾ ಶಾಕಾರ, ಶಿದ್ದಲಿಂಗೇಶ, ಕಾರ್ಯಕ್ರಮ ಸಂಯೋಜಕ ಪರಶುರಾಮ ನಾಗೋಜಿ ಉಪಸ್ಥಿತರಿದ್ದರು.