ಕುಷ್ಟಗಿ: ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡು ಮಕ್ಕಳಿಗೆ ಪಿಜಿಯೋಥೆರಪಿ ಚಿಕಿತ್ಸೆ ಪಡೆಯುವಂತಹ ಕಾಲದಲ್ಲಿ ದೋಟಿಹಾಳ ಗ್ರಾಮದಲ್ಲಿ ಉಚಿತ ಪಿಜಿಯೋಥೆರಪಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮಾಜಿ ಶಾಸಕ ಹಸನಸಾಬ ದೋಟಿಹಾಳ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ನೂತನವಾಗಿ ನಿರ್ಮಾಣವಾದ ಪಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೋಟಿಹಾಳ ವ್ಯಾಪ್ತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳು ಬರುತ್ತಿದ್ದು, ಈ ಗ್ರಾಮಗಳಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸರ್ವೆ ಕಾರ್ಯ ಮಾಡುವ ಮೂಲಕ ಮಕ್ಕಳನ್ನು ಪತ್ತೆಹಚ್ಚಿ ಈ ಕೇಂದ್ರಕ್ಕೆ ಕರೆ ತರುವ ಕಾರ್ಯ ಮಾಡಬೇಕು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕುಷ್ಟಗಿ ತಾಲೂಕಿನಲ್ಲಿಯೂ ಇರಲಾರದ ಪಿಜಿಯೋಥೆರಪಿ ಕೇಂದ್ರವನ್ನು ನಮ್ಮ ಗ್ರಾಮದಲ್ಲಿ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ದೋಟಿಹಾಳ ಗ್ರಾಪಂನವರು ನಿರ್ಮಾಣ ಮಾಡಲು ಮುಂದಾಗಿರುವುದು ಸಂತಸದ ವಿಷಯವಾಗಿದೆ. ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿಕೊಡಲಾಗುತ್ತದೆ ಎಂದರು.ಡಾ.ಸಂತೋಷಕುಮಾರ ಬಿರಾದಾರ ಮಾತನಾಡಿ, ಕೇವಲ ಮಹಾನಗರಗಳಲ್ಲಿ ಸಿಗುವ ಪಿಜಿಯೋಥೆರಪಿ ಚಿಕಿತ್ಸೆ ನಮ್ಮ ಗ್ರಾಮೀಣ ಪ್ರದೇಶಕ್ಕೆ ಬಂದಿದೆ. ಸಾವಿರಾರು ರುಪಾಯಿ ಪಡೆದು ಚಿಕಿತ್ಸೆ ನೀಡುವ ಈ ಕಾಲದಲ್ಲಿ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಬೆಂಗಳೂರು ಚಿಕಿತ್ಸಾ ಕೇಂದ್ರ ತೆರೆದು ಉಚಿತ ಸೇವೆ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಸಂಘದ ಸಂಸ್ಥಾಪಕ ರಘು ಹುಬ್ಬಳ್ಳಿ ಮಾತನಾಡಿ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ ಸುಮಾರು 19 ವರ್ಷಗಳಿಂದ ಮೂರು ತಿಂಗಳಿಂದ ಆರು ವರ್ಷದವರೆಗಿನ ಮಕ್ಕಳಲ್ಲಿರುವ ಕುಂಠಿತ ಬೆಳವಣಿಗೆಯನ್ನು ಕಂಡು ತಂದೆ-ತಾಯಿ ಸುಮ್ಮನೆ ಕುಳಿತುಕೊಳ್ಳಬಾರದು. ಅಂಥವರನ್ನು ಪಿಜಿಯೋಥೆರಪಿ ಕೇಂದ್ರಕ್ಕೆ ಕರೆ ತಂದು ಉಚಿತ ಚಿಕಿತ್ಸೆ ಪಡೆಯಬೇಕು. ರೋಗಿಗಳ ಅನುಕೂಲಕ್ಕೆ ತಕ್ಕಂತೆ ಚಿಕಿತ್ಸೆ ಕೊಡಲಾಗುತ್ತದೆ. ನಮ್ಮ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆದಲ್ಲಿ ಮುಂದಾಗುವ ಸಂಪೂರ್ಣ ಅಂಗವಿಕಲತೆ ತಡೆಯಬಹುದು ಎಂದರು.ಅಂಗನವಾಡಿ ಸೂಪರ್ ವೈಸರ್ ಅನ್ನಪೂರ್ಣ ಪಾಟೀಲ ಮಾತನಾಡಿ, ಆಶಾದೀಪ ಸಂಸ್ಥೆಯು ಸಮಾಜಕ್ಕೆ ಮಾದರಿ ಸಂಸ್ಥೆಯಾಗಿದೆ. ಯಾವುದೇ ಹಣವಿಲ್ಲದೆ ಉಚಿತವಾಗಿ ಬೆಳವಣಿಗೆಯಲ್ಲಿ ನಿಧಾನಗತಿ ಇರುವಂತಹ ಮಕ್ಕಳಿಗೆ ಆಶಾದೀಪವಾಗಿ ಕೆಲಸ ಮಾಡುತ್ತಿದೆ. ವೃದ್ಧರಿಗೆ ಕೂಡ ಆಶ್ರಯ ನೀಡಿ ಪುಣ್ಯದ ಕಾರ್ಯ ಮಾಡುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ವಡ್ಡರ, ಪಿಡಿಒ ಮುತ್ತಣ್ಣ, ಗ್ರಾಪಂ ಸದಸ್ಯರಾದ ರುಕುಮುದ್ದಿನ ನೀಲಗಾರ, ಲಾಡಸಾಬ ಯಲಬುರ್ಗಿ, ಶರೀಫಾಬೀ ಯರಡೋಣಿ, ನಾಗಮ್ಮ ಜುಮಲಾಪುರ, ಎಂಆರ್‌ಡಬ್ಲು ಚಂದ್ರಶೇಖರ ಹಿರೇಮನಿ, ವಿಆರ್‌ಡಬ್ಲು ಶರಣಮ್ಮ ಮಡಿವಾಳರ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.