ದೇವದುರ್ಗ: ತೀವ್ರ ಕುತೂಹಲ, ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದ ಪಿಕಾರ್ಡ್ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ.) ಬ್ಯಾಂಕ್ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮಲ್ಲನಗೌಡ ಗುಂಡಗುರ್ತಿ ಸೋಲು ಅನುಭವಿಸಿದ್ದು, ಶರಣಗೌಡ ಮದರಕಲ್ ಪೆನಾಲ್‌ಗೆ ಭರ್ಜರಿ ಜಯ ದೊರಕಿದೆ.ಪಟ್ಟಣದ ಪಟೇಲ್ ಓಣಿ ಪ್ರಾಢ ಶಾಲೆಯಲ್ಲಿ ಭಾನುವಾರ 11 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಈಗಾಗಲೇ 3 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆಗಳು ಜರುಗಿದೆ. ಹಾಲಿ ಅಧ್ಯಕ್ಷ ಮಲ್ಲನಗೌಡ ಗುಂಡಗುರ್ತಿ ತಮ್ಮ ಪ್ರತಿಸ್ಪರ್ಧಿ ಲಿಂಗನಗೌಡ ದೊಂಡಂಬಳಿ ವಿರುದ್ಧ 10 ಮತಗಳ ಅಂತರದಿಂದ ಸೋಲು ಅನುಭವಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ಮಲ್ಲನಗೌಡ ಗುಂಡಗುರ್ತಿ ಅವರು ಕಳೆದ 34 ವರ್ಷಗಳಿಂದ ಬ್ಯಾಂಕ್ ಆಡಳಿತ ಮಂಡಳಿ ಹಿಡಿತ ಹೊಂದಿದ್ದು, ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿಯವರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದರು. ಇವರ ಸೋಲು ಸಹಕಾರ ಇಲಾಖೆ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಗೂಗಲ್ ಕ್ಷೇತ್ರದಿಂದ ರಾಜಶೇಖರ ಬಸವಂತಪೂರ ತಮ್ಮ ಪ್ರತಿಸ್ಪರ್ಧಿ ಶರಣಗೌಡ ಹಿರೇರಾಯಕುಂಪಿ ವಿರುದ್ಧ 2 ಮತಗಳ ಅಂತರದಿಂದ ಜಯಗಳಿಸಿದರೆ, ರಾಮದುರ್ಗ ಕ್ಷೇತ್ರದಿಂದ ಮಲ್ಲನಗೌಡ ಗೆಜ್ಜಬಾವಿ ಪ್ರತಿಸ್ಪರ್ಧಿ ಶಿವರಾಜ ಗೆಜ್ಜೆಬಾವಿ ವಿರುದ್ಧ 8 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಗಬ್ಬೂರ ಕ್ಷೇತ್ರದಿಂದ ಶರಣಗೌಡ ಹೊಸಮನಿ ಹಂಚಿನಾಳ ಪ್ರತಿಸ್ಪರ್ಧಿ ಶರಣಬಸವ ಬೂದಿನಾಳ ವಿರುದ್ಧ 22 ಮತಗಳ ಅಂತರದಿಂದ ಗೆದ್ದರೆ, ಮಸರಕಲ್ ಕ್ಷೇತ್ರದಿಂದ ರವೀಂದ್ರ ಗೌಡ ಮಿಯ್ಯಾಪೂರ ಪ್ರತಿಸ್ಪರ್ಧಿ ಇಸ್ಮಾಯಿಲ್ ಸಾಬ್ ಮಸರಕಲ್ ವಿರುದ್ಧ 17 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಕ್ಯಾದಿಗ್ಗೇರಾ ಕ್ಷೇತ್ರದಿಂದ ಮೋನಪ್ಪ ನಾಯಕ ಕ್ಯಾದಿಗ್ಗೇರಾ ಪ್ರತಿಸ್ಪರ್ಧಿ ಉಮಾಪತಿ ವಿರುದ್ಧ 29 ಮತಗಳ ಅಂತರದಿಂದ ಗೆಲುವು ಸಾಧಿಸಿರೆ, ಅರಕೇರಾ ಕ್ಷೇತ್ರದಿಂದ ದೇವಿಂದ್ರನಾಯಕ ಮಸ್ಕಿ ಕೊತ್ತದೊಡ್ಡಿ ಪ್ರತಿಸ್ಪರ್ಧಿ ರಾಮುನಾಯ್ಕ ಬಂಡೇಗುಡ್ಡ ವಿರುದ್ಧ ಕೇವಲ ಒಂದು ಮತದಿಂದ ಜಯಗಳಿಸಿ ಗಮನ ಸೆಳೆದಿದ್ದಾರೆ.ಅಲ್ಕೋಡ್ ಕ್ಷೇತ್ರದಿಂದ ಡಾ.ಶಿವಶಂಕರ ಪಾಟೀಲ್ ಪ್ರತಿಸ್ಪರ್ಧಿ ಕುಪ್ಪಯ್ಯ ವಿರುದ್ಧ 42 ಮತಗಳ ಅಂತರದಿಂದ ಜಯಗಳಿಸಿದರೆ, ಗಲಗ ಕ್ಷೇತ್ರದಿಂದ ಮುತ್ತಮ್ಮ ಪ್ರತಿಸ್ಪರ್ಧಿ ಸಂಗಮ್ಮ ಲಿಂಗನಗೌಡ ಸಾಹು ವಿರುದ್ಧ 26 ಮತಗಳ ಅಂತರದಿಂದ ಗೆದ್ದಿದ್ದಾರೆ. ದೇವದುರ್ಗ ಹಿಂದುಳಿದ ವರ್ಗಗಳ ಕ್ಷೇತ್ರದಿಂದ ಶಿವರಾಜ ಪೂಜಾರಿ ಪ್ರತಿಸ್ಪರ್ಧಿ ಪ್ರಭಣ್ಣ ಕೊಳ್ಳಿ ವಿರುದ್ಧ 39 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.ದೇವದುರ್ಗ (ಸಂಪೂರ್ಣ ತಾಲೂಕು ವ್ಯಾಪ್ತಿ) ಸಾಲಗಾರರಲ್ಲದ ಕ್ಷೇತ್ರದಿಂದ ಮಾಜಿ ಪುರಸಭಾ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟ ಪ್ರತಿಸ್ಪರ್ಧಿ ಶಿವುಕುಮಾರ ಬಳಿ ವಿರುದ್ಧ 66 ಅಂತರದಿಂದ ಜಯಗಳಿಸಿದ್ದು, ಚುನಾವಣೆ ಪೂರ್ವದಲ್ಲಿಯೇ ಶಿವುಕುಮಾರ ಬಳೆ ನಿವೃತ್ತಿ ಘೋಷಿಸಿದ್ದರು.3 ಬಾರಿ ಮತ ಎಣಿಕೆಅರಕೇರಾ ಕ್ಷೇತ್ರದಿಂದ ವಿಜಯಿಯಾಗಿರುವ ದೇವಿಂದ್ರನಾಯಕ ಮಸ್ಕಿ, ಕೊತ್ತದೊಡ್ಡಿ ಹಾಗೂ ಪ್ರತಿಸ್ಪರ್ಧಿ ರಾಮು ನಾಯ್ಕ ಬಂಡೇಗುಡ್ಡ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೇವಲ ಒಂದು ಮತದ ಅಂತರ ಕಂಡು ಬಂದ ಹಿನ್ನೆಲೆಯಲ್ಲಿ ಮೂರು ಬಾರಿ ಮತಗಳ ಎಣಿಕೆ ಮಾಡಲಾಯಿತು. ದೇವಿಂದ್ರನಾಯಕ ಮಸ್ಕಿ ಅಂತಿಮವಾಗಿ ವಿಜಯಿಯಾಗಿ ಗಮನ ಸೆಳೆದರು.ಚುನಾವಣೆ ತೀವ್ರ ಹಾಗೂ ನೇರ ಪೈಪೋಟಿ ಏರ್ಪಟ್ಟಿದ್ದ ಪರಿಣಾಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಮೊದಲ ಬಾರಿಗೆ ಬಿರುಸಿನ ಪ್ರಚಾರ ಕಣಕ್ಕೆ ಧುಮ್ಮುಕಿದ್ದರು. ಮಾಜಿ ಸಂಸದ ಬಿ.ವಿ.ನಾಯಕರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾ.ಪಾಟೀಲ್ರ ಪ್ರಯತ್ನಕ್ಕೆ ಫಲ ದೊರಕಿದಂತಾಗಿದೆ.ಐತಿಹಾಸಿಕ ದಾಖಲೆಸ್ಥಳೀಯ ಪಿಕಾರ್ಡ ಬ್ಯಾಂಕ್ ಚುನಾವಣೆ ಇತಿಹಾಸದಲ್ಲಿಯೇ ಈ ಬಾರಿಯ ಜಿದ್ದಾಜಿದ್ದು, ಅರ್ಭಟದ ಪ್ರಚಾರ ಏರ್ಪಟ್ಟಿತ್ತು. 5 ದಶಕಗಳ ಬ್ಯಾಂಕ್ ಇತಿಹಾಸದಲ್ಲಿಯೇ ಹೊಸ ದಾಖಲೆ ನಿರ್ಮಿಸಿದಂತಾಗಿದೆ.ಸಹಜವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಅನಿವಾರ್ಯ ಸಂದರ್ಭದಲ್ಲಿ ಒಂದೆರಡು ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದ ಇತಿಹಾಸವಿದೆ. ಈ ಬಾರಿ 14 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಾದ ಜಾಲಹಳ್ಳಿ, ಮುಂಡರಗಿ ಮತ್ತು ಕೊಪ್ಪರ ಮಾತ್ರ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 11 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಚುನಾವಣೆ ಏರ್ಪಟ್ಟಿತ್ತು.