- ಪಾಳುಬಿದ್ದ ವಸತಿ ಗೃಹ ರಿಪೇರಿಗೊಳಿಸಿ ಗೃಹಪ್ರವೇಶ । ಊರೂರು ಸುತ್ತಿ ಹಾಡು ಹೇಳಿ ಬದುಕುತ್ತಿರುವ ಅಂಧರು
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಬಾಡಿಗೆ ಮನೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಆಸರೆ ಪಡೆದು, ಊರು ಊರುಗಳಿಗೆ ಹೋಗಿ ಹಾಡು ಹೇಳುವ ಮೂಲಕ ಉದರ ಪೋಷಣೆ ಮಾಡಿಕೊಳ್ಳುತ್ತಿದ್ದ ಸಂತೃಪ್ತಿ ಅಂಧರ ಸಂಸ್ಥೆಗೆ ಶಾಸಕ ಡಿ.ಜಿ.ಶಾಂತನಗೌಡ ತಾತ್ಕಾಲಿಕ ಸೂರು ವ್ಯವಸ್ಥೆ ಕಲ್ಪಿಸಿ, ಮಾನವೀಯತೆ ಮೆರೆದಿದ್ದಾರೆ.ಹೊನ್ನಾಳಿಯ ಟಿ.ಬಿ. ವೃತ್ತದ ಬಳಿಯ ಸರ್ಕಾರಿ ನೌಕರರ ವಸತಿ ಗೃಹಗಳಲ್ಲಿ ಹಾಳುಬಿದ್ದಿದ್ದ ಒಂದು ಮನೆಯನ್ನು ಶಾಸಕ ಡಿ.ಜಿ.ಶಾಂತನಗೌಡ ಅವರು ವೈಯಕ್ತಿಕವಾಗಿ ₹2.25 ಲಕ್ಷ ಖರ್ಚು ಮಾಡಿ, ಸಂಪೂರ್ಣ ರಿಪೇರಿ ಮಾಡಿಸಿದ್ದಾರೆ. ಕಟ್ಟಡಕ್ಕೆ ಬಣ್ಣ ಬಳಿಸಿ, ಅಂಧರ ವಾಸಕ್ಕಾಗಿ ಭಾನುವಾರ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಿಸಿದರು. ಇದರಿಂದ ಅಂಧರ ಮೊಗದಲ್ಲಿ ನೆಮ್ಮದಿ ಮೂಡಿಸಿದ್ದಾರೆ. ಅಂಧ ಕಲಾವಿದರಿಗೆ ಸೂರು ಕಲ್ಪಿಸುವ ಮೂಲಕ ಅವರ ಬಾಳಿಗೆ ಬೆಳಕಾಗುವ ಕೆಲಸವನ್ನು ಶಾಸಕ ಶಾಂತನಗೌಡ ಕೈಗೊಂಡಿದ್ದಾರೆ.
ತುಮ್ಮಿನಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಆದಕಾರಣ ಬಾಡಿಗೆ ಮನೆ ತರೆವುಗೊಳಿಸಬೇಕಾದ ಅನಿವಾರ್ಯತೆ ಬಂದಿತು. ಆಗ ಹಲವು ವರ್ಷಗಳಿಂದ ಟಿ.ಬಿ. ವೃತ್ತದ ಸಮೀಪದ ಪ್ರವಾಸಿ ಮಂದಿರ ರಸ್ತೆಯಲ್ಲಿ ಸರ್ಕಾರಿ ನೌಕರರ ವಸತಿ ಗೃಹ ಹಲವಾರು ವರ್ಷಗಳಿಂದ ಖಾಲಿಯಾಗಿ ಹಾಳುಬಿದ್ದಿತ್ತು. ಆ ಕಟ್ಟಡವನ್ನೇ ಈಗ ಸ್ವಂತ ಹಣ ಖರ್ಚು ಮಾಡಿ, ರಿಪೇರಿಗೊಳಿಸಿ, ಮೂಲ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಿ, ಭಾನುವಾರ ಗೃಹಪ್ರವೇಶ ಮಾಡಿ, ಹಸ್ತಾಂತರಿಸಿರುವುದಾಗಿ ಶಾಸಕರು ಹೇಳಿದರು.
- - -
- - -
ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದ ಬಳಿ ಹಾಳುಬಿದ್ದಿದ್ದ ಕ್ವಾಟ್ರಸ್ ಮನೆಯನ್ನು ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿರುವ ಶಾಸಕ ಡಿ.ಜಿ.ಶಾಂತನಗೌಡ ಭಾನುವಾರ ಗೃಹಪ್ರವೇಶ ನೆರವೇರಿಸಿ, ಸಂತೃಪ್ತಿ ಅಂಧರ ಸಂಸ್ಥೆಗೆ ಕಟ್ಟಡ ಹಸ್ತಾಂತರಿಸಿದರು.