ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ಕಳವು ಮಾಡಿದ ಸಂದರ್ಭದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಮತ್ತು ಸ್ಥಳೀಯ ಪತ್ರಕರ್ತರು ಸೆರೆಹಿಡಿದ ಹಲವು ವಿಡಿಯೋ ಕ್ಲಿಪ್ ಗಳನ್ನು ಆಧರಿಸಿ ಪೊಲೀಸರ ತಂಡ ಭದ್ರಾವತಿಯ ಜಯಣ್ಣ, ಪುಟ್ಟರಾಜು, ನಾಗರಾಜ, ವೆಂಕಟೇಶ್, ರಾಮು, ಉಮೇಶ , ಜಯಣ್ಣ, ಭೋಜಪ್ಪ, ಮೆಹಬೂಬ್ ಸುಭಾನ್, ಬೆಂಗಳೂರಿನ ಹೆಬ್ಬಗೋಡಿಯ ಹರೀಶ್ , ನೆಲಮಂಗಲದ ರಂಗಣ್ಣ, ಭದ್ರಾವತಿಯ ಗಿರೀಶ, ಬಾಲು ಅವರನ್ನು ಬಂಧಿಸಿದೆ. ಬಂಧಿತರಿಂದ 12 ಮೊಬೈಲ್, ಎರಡು ಕಾರುಗಳು, ರು. 2,65,960 ನಗದು ವಶಪಡಿಸಿಕೊಳ್ಳಲಾಗಿದೆ.
ಮಾ.27ರಂದು ಕುಶಾಲನಗರದಲ್ಲಿ ಬಿಜೆಪಿ ಸಮಾವೇಶ ನಡೆಯುವ ಸಂದರ್ಭದಲ್ಲಿ ಕುಶಾಲನಗರದ ನಿವಾಸಿಗಳಾದ ಎಂ.ಎಂ. ಚರಣ್, ಡಿ.ಎಚ್. ಚಂದ್ರಶೇಖರ್, ಎಚ್.ಮಣಿ ಅವರ ಜೇಬುಗಳಿಂದ ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಬಗ್ಗೆ ಕುಶಾಲನಗರದಲ್ಲಿ ದೂರು ದಾಖಲಾಗಿತ್ತು.ಅದೇ ದಿನ ಮಡಿಕೇರಿ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ರಂಗಸಮುದ್ರ ನಿವಾಸಿ ನಿತಿನ್, ವಿರಾಜಪೇಟೆ ನಿವಾಸಿ ಯೋಗೇಶ್ ಮತ್ತು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಜೇಬುಗಳಿಂದಲೂ ಅಪರಿಚಿತ ವ್ಯಕ್ತಿಗಳು ಹಣ ಲಪಟಾಯಿಸಿ ಪರಾರಿಯಾಗಿದ್ದರು. ಪ್ರತ್ಯೇಕವಾಗಿ ಮೂರು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಸುಮಾರು ರು. 2 ಲಕ್ಷ ನಗದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ತಂಡ ರಚಿಸಲಾಗಿತ್ತು.
ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಪ್ರಶಂಸಿದ್ದಾರೆ.