ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಯಾತ್ರಿ ನಿವಾಸಕ್ಕೆ ಶಾಸಕ ಎಚ್.ಕೆ.ಸುರೇಶ್ ಮರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೇಲೂರು ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಯಾತ್ರಿ ನಿವಾಸಕ್ಕೆ ಶಾಸಕ ಎಚ್.ಕೆ.ಸುರೇಶ್ ಮರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಬೇಲೂರು ಈಗಾಗಲೇ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಪಟ್ಟಣವಾಗಿದೆ. ಇಲ್ಲಿಗೆ ಅನುಕೂಲವಾಗುವ ಕೆಲಸಗಳು ಇನ್ನು ಮುಂದೆ ರಾಜ್ಯ,ಕೇಂದ್ರ ಸರ್ಕಾರಗಳು ನಡೆಸುವ ಭರವಸೆ ಇದೆ. ಈ ಕಾರಣದಿಂದಲೇ ಸುಮಾರು ದಿನದಿಂದ ಸ್ಥಗಿತವಾಗಿದ್ದ ಯಾತ್ರಿ ನಿವಾಸವನ್ನು ಮರು ಚಾಲನೆ ನೀಡಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಲ್ಲಿನ ಕೆಲಸಗಳು ಮತ್ತು ವೈಪಲ್ಯತೆಯನ್ನು ಖುದ್ದು ವೀಕ್ಷಣೆ ಮಾಡಿದ್ದು ಮರು ಚಾಲನೆ ಅವಕಾಶ ನೀಡಿದ್ದಾರೆ ಎಂದರು. ಧರ್ಮಸ್ಥಳ,ಕುಕ್ಕೆ ಸುಬ್ರಮಣ್ಯ, ಕಟೀಲು, ಚಿಕ್ಕಮಗಳೂರು, ಶೃಂಗೇರಿ ಇನ್ನು ಮುಂತಾದ ಮಲೆನಾಡು ಭಾಗದ ಪ್ರವಾಸಿ ತಾಣಕ್ಕೆ ಬೇಲೂರು ಕೇಂದ್ರ ಸ್ಥಾನ ಮತ್ತು ಇಲ್ಲಿಯೇ ಹಾದು ಹೋಗಬೇಕಿದೆ. ಬರುವ ಪ್ರವಾಸಿಗರು ಚನ್ನಕೇಶವ ದೇಗುಲವನ್ನು ವೀಕ್ಷಿಸಿದ ಬಳಿಕ ಸುಸಜ್ಜಿತ ಯಾತ್ರಿ ನಿವಾಸಗಳು ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ. ಇದನ್ನೇ ಮನಗೊಂಡು ಬೇಲೂರು ಸುತ್ತಮುತ್ತ ಹೈಟೆಕ್ ಮಟ್ಟದಲ್ಲಿ ಯಾತ್ರಿ ನಿವಾಸಗಳನ್ನು ತೆರೆಯುವ ನಿಟ್ಟಿನಲ್ಲಿ ನಾನು ಈಗಾಗಲೇ ಸಂಬಂಧಪಟ್ಟ ಮಂತ್ರಿಗಳಲ್ಲಿ ಮನವಿ ಸಲ್ಲಿಸಿದ್ದೇನೆ ಎಂದರು. ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ದೇಗುಲಕ್ಕೆ ಸಂಬಂಧಿಸಿದ ಯಾತ್ರಿ ನಿವಾಸ ನವೀಕರಣದ ಜೊತೆಗೆ ಹೈಟೆಕ್ ಸೌಲಭ್ಯವನ್ನು ರು. ೨೩ ಲಕ್ಷದ ಮೌಲ್ಯದಲ್ಲಿ ನಡೆಸಲಾಗಿದೆ. ಮುಂದಿನ ದಿನದಲ್ಲಿ ಪ್ರವಾಸಿಗರು ಮತ್ತು ಭಕ್ತರಿಗೆ ಅಗತ್ಯ ಸವಲತ್ತುಗಳನ್ನು ದೇಗುಲ ಆಡಳಿತ ನಡೆಸಲು ಬದ್ಧವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಮಮತಾ, ಚನ್ನಕೇಶವ ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಯೋಗೀಶ್, ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿ ಭಟ್ಟರ್ ಮತ್ತು ನರಸಿಂಹಭಟ್ಟರ್, ಬಿಜೆಪಿ ಮುಖಂಡ ಸಿ.ಎಸ್.ಪ್ರಕಾಶ್, ದೇಗುಲ ಧರ್ಮದರ್ಶಿ ವಿಜಯಲಕ್ಷ್ಮಿ, ಸುಧಾ ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.