ಕನ್ನಡಪ್ರಭ ವಾರ್ತೆ ಧಾರವಾಡ ಇಲ್ಲಿಗೆ ಸಮೀಪದ ರಾಯಾಪೂರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರದಲ್ಲಿ ಕೋಟಿಗೂ ಅಧಿಕ ನಗದು ಕಳ್ಳತನವಾಗಿದೆ. ಸೋಮವಾರ ರಾತ್ರಿ ಸೆಕ್ಯುರಿಟಿ ಗಾರ್ಡ್‌ಗಳು ಊಟಕ್ಕೆ ಹೋದ ಸಂದರ್ಭದಲ್ಲಿ ಒಳನುಗ್ಗಿದ ಖದೀಮರು ಕಚೇರಿಯಲ್ಲಿನ ₹1.20 ಕೋಟಿ ನಗದು ದೋಚಿಕೊಂಡು ಹೋಗಿದ್ದಾರೆ. ಕೋಣೆಯ ಕಿಟಕಿಯೊಳಗಿಂದ ಒಳ ಪ್ರವೇಶಿಸಿದ ದುಷ್ಕರ್ಮಿಗಳು, ಲಾಕರ್ ಒಡೆದು ಹಣ ದೋಚಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಸಂಗಮೇಶ ದಿಡಿಗಿನಾಳ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಸಹಿತ ಭೇಟಿ ನೀಡಿ ಪರಿಶೀಲಿಸಿದೆ. ಕಚೇರಿಯಲ್ಲಿ ಸಿಸಿಟಿವಿ ಇಲ್ಲ. ಇದು ಕಳ್ಳರಿಗೆ ಸಹಕಾರಿಯಾಗಿದೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.