20 ರಂದು ಕರಾವಳಿ ಉತ್ಸವ ಮೈದಾನದಲ್ಲಿ ‘ಪಿಲಿನಲಿಕೆ-11’ ಸ್ಪರ್ಧೆ

KannadaprabhaNewsNetwork |  
Published : Oct 18, 2026, 03:15 AM IST
ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿದರು. | Kannada Prabha

ಸಾರಾಂಶ

ಪಿಲಿನಲಿಕೆ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಮಿಥುನ್‌ ರೈ ಸಾರಥ್ಯದಲ್ಲಿ ನಮ್ಮ ಟಿವಿ ಸಹಯೋಗದಲ್ಲಿ ‘ಪಿಲಿನಲಿಕೆ-11’ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅ. 20 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಮಿಥುನ್‌ ರೈ ಸಾರಥ್ಯದಲ್ಲಿ ನಮ್ಮ ಟಿವಿ ಸಹಯೋಗದಲ್ಲಿ ‘ಪಿಲಿನಲಿಕೆ-11’ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅ. 20 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಪಿಲಿನಲಿಕೆ ಪ್ರತಿಷ್ಠಾನ ಅಧ್ಯಕ್ಷ ಮಿಥುನ್‌ ರೈ ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನ ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಿಸಿದ ಪಿಲಿನಲಿಕೆ ಸ್ಪರ್ಧೆ ಯಶಸ್ವಿಯಾಗಿ 10 ಆವೃತ್ತಿಗಳನ್ನು ಪೂರೈಸಿದೆ ಎಂದರು.

9 ತಂಡ, 10 ಲಕ್ಷ ರು. ಬಹುಮಾನ!:ಈ ಬಾರಿಯ ಪಿಲಿನಲಿಕೆ-11 ಸ್ಪರ್ಧಾ ಕಣದಲ್ಲಿ ತುಳುನಾಡಿನ ಪ್ರತಿಷ್ಠಿತ ಮತ್ತು ಆಹ್ವಾನಿತ 9 ತಂಡಗಳು ಭಾಗವಹಿಸಲಿವೆ. ಶಿವಶಕ್ತಿ ಟೈಗರ್ಸ್‌ ಕುಂಜತ್ತೂರು ಮಂಜೇಶ್ವರ, ಟ್ಯಾಲೆಂಟ್‌ ಟೈಗರ್ಸ್‌ ತುಳುನಾಡು, ಮುಳಿಹಿತ್ಲು ಗೇಮ್ಸ್‌ಟೀಮ್‌, ಜೂನಿಯರ್‌ ಬಾಯ್ಸ್‌ ಚಿಲಿಂಬಿ, ಫ್ರೆಂಡ್ಸ್‌ ಬಪ್ಪಲ್‌, ಎಮ್ಮೆಕೆರೆ ಫ್ರೆಂಡ್ಸ್‌ ಸರ್ಕಲ್‌, ಸೋಮೇಶ್ವರ ಫ್ರೆಂಡ್ಸ್‌ಕ್ಲಬ್‌, ಗೋರಕ್ಷನಾಥ ಹುಲಿ, ಪೊಳಲಿ ಟೈಗರ್ಸ್‌ ಈ ತಂಡಗಳು ಭಾಗವಹಿಸಲಿವೆ.

ಪ್ರತಿಯೊಂದು ತಂಡವೂ ಅತ್ಯುತ್ಕೃಷ್ಟ ಪ್ರದರ್ಶನ ನೀಡುವುದರಿಂದ ಗೆಲುವು ನಿರ್ಧಾರ ಕೂಡ ತೀರ್ಪುಗಾರರಿಗೆ ಸವಾಲಿನ ಸಂಗತಿಯಾಗಿದೆ. ಪಿಲಿನಲಿಕೆ-11 ಸ್ಪರ್ಧೆ ಬೆಳಗ್ಗೆ 11ರಿಂದ ರಾತ್ರಿ 11 ಗಂಟೆ ವರೆಗೆ ನಡೆಯಲಿದೆ ಎಂದರು.ಗೆಲುವು ಪಡೆಯುವ ತಂಡಗಳಿಗೆ ಪ್ರಥಮ 10 ಲಕ್ಷ ರು. ಮತ್ತು ಫಲಕ, ದ್ವಿತೀಯ 5 ಲಕ್ಷ ರು. ಮತ್ತು ಫಲಕ, ತೃತೀಯ 3 ಲಕ್ಷ ರು. ಮತ್ತು ಫಲಕ ಬಹುಮಾನ ನೀಡಲಾಗುವುದು.

ತಾರಾ ದಿಗ್ಗಜರ ಮೆರುಗು:ಈ ಬಾರಿ ಪಿಲಿನಲಿಕೆಗೆ ರಾಜಕೀಯ ನಾಯಕರು, ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನ ಖ್ಯಾತ ತಾರೆಯರು, ಕ್ರಿಕೆಟ್‌ ಕ್ಷೇತ್ರದ ದಿಗ್ಗಜರು ತಾರಾ ಮೆರುಗನ್ನು ನೀಡಲಿದ್ದಾರೆ. ಮುಖ್ಯವಾಗಿ ಆರ್‌ಸಿಬಿ ಕಪ್‌ ಗೆದ್ದುಕೊಟ್ಟ ಭಾರತ ತಂಡದ ನಾಯಕ ದಿನೇಶ್‌ ಕಾರ್ತಿಕ್‌, ಬಾಕ್ಸರ್‌ ವಿಜೇಂದ್ರ ಸಿಂಗ್‌, ಬಾಲಿವುಡ್‌ ತಾರೆ ಸುನಿಲ್‌ ಶೆಟ್ಟಿ, ಮಲಯಾಳಂ ನಟ ಉನ್ನಿ ಮುಕುಂದನ್‌, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ರೆಸ್ಲಿಂಗ್‌ ಖ್ಯಾತಿಯ ಗ್ರೇಟ್ ಖಲಿ ಮುಂತಾದವರು ಆಗಮಿಸಲಿದ್ದಾರೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ವೈಟ್‌ಲಿಫ್ಟರ್‌ ಕೀರ್ತನ ಶೆಟ್ಟಿ, ಕ್ರೀಡಾಪಟು ಸತೀಶ್‌ ಶೆಟ್ಟಿ, ಅಥ್ಲೆಟಿಕ್ಸ್‌ ಚಾಂಪ್ಯನ್‌ ಪೂವಮ್ಮ ಹಾಗೂ ಕುದ್ರೋಳಿಯ ರಂಗವಲ್ಲಿ ತಂಡವನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಅಲ್ಲದೆ ಈ ಬಾರಿ 50 ಸ್ಯಾಕ್ಸೋಫೋನ್‌ ತಂಡಗಳು ಪಿಲಿನಲಿಕೆ-11ಕ್ಕೆ ವಿಶೇಷ ಕಳೆ ಹೆಚ್ಚಿಸಲಿವೆ ಎಂದರು.ಸಿಎಂಗೆ ಆಹ್ವಾನ: ಈ ಬಾರಿಯ ಪಿಲಿನಲಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಲಾಗಿದೆ. ಕಳೆದ ಬಾರಿ ಡಿಸಿಎಂ ಆಗಿದ್ದಾಗ ಡಿಕೆಶಿ ಆಗಮಿಸಿದ್ದರು. ಇವರಲ್ಲದೆ ಭಾರತದ ತಂಡದ ಕಾಪ್ತಾನ ಆಗಿದ್ದ ಸಚಿನ್‌ ತೆಂಡೂಲ್ಕರ್‌ನ್ನು ಕೂಡ ಆಹ್ವಾನಿಸಲಾಗುತ್ತಿದೆ ಎಂದರು.

ನಮ್ಮ ಟಿವಿ ಆಡಳಿತ ನಿರ್ದೇಶಕ ಡಾ.ಶಿವಶರಣ್‌ ಶೆಟ್ಟಿ, ಪದಾಧಿಕಾರಿಗಳಾದ ಆನಂದರಾಜ್‌, ನಿಶಾನ್‌ ಶೆಟ್ಟಿ, ನವೀನ್‌ ಶೆಟ್ಟಿ, ಅವಿನಾಶ್‌ ಮತ್ತಿತರರಿದ್ದರು. ಹುಲಿ ತಂಡಕ್ಕೆ ತಲಾ 2 ಲಕ್ಷ ರು. ನೆರವಿಗೆ ಸಿಎಂಗೆ ಮನವಿ: ದ.ಕ. ಜಿಲ್ಲೆಯಲ್ಲಿ ಅಧಿಕೃತವಾಗಿ ನಾವು ಪಿಲಿನಲಿಕೆ ಸ್ಪರ್ಧೆ ಕಾರ್ಯಕ್ರಮವನ್ನು ಆರಂಭಿಸಿದ ಬಳಿಕ ಈಗ ಎಲ್ಲ ಕಡೆ ಸ್ಪರ್ಧೆಗಳು ನಡೆಯುತ್ತಿದೆ. ದ.ಕ. ಜಿಲ್ಲೆಯ ಒಂಭತ್ತು ಕಡೆಗಳಲ್ಲಿ ಪಿಲಿ ನಲಿಕೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಹುಲಿ ವೇಷ ಕುಣಿಯುವ ತಂಡಕ್ಕೆ ತಲಾ 2 ಲಕ್ಷ ರು.ನಂತೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಅದಕ್ಕೆ ಆಂಶಿಕ ಒಪ್ಪಿಗೆ ದೊರೆತಿದೆ ಎಂದು ಮಿಥುನ್‌ ರೈ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಯಾನ್ಸರ್ ಗೆ ಭಯಪಡದೆ ತಪಾಸಣೆ ಮಾಡಿಸಿಕೊಳ್ಳಿ : ಡಾ. ಅನುಷಾ
ಪದವಿ ಜೀವನದ ಮಹತ್ತರವಾದ ಕಾಲಘಟ್ಟ‌: ಡಾ. ಪ್ರಮೋದ್ ಕುಮಾರ್