ಬೆಂಗಳೂರು: ಪೀಣ್ಯ ಫ್ಲೈಓವರ್‌ ಇನ್ನೂ 3 ದಿನ ಬಂದ್‌

KannadaprabhaNewsNetwork |  
Published : Jan 17, 2024, 01:47 AM ISTUpdated : Jan 17, 2024, 05:38 PM IST
ಫ್ಲೈಓವರ್‌ | Kannada Prabha

ಸಾರಾಂಶ

ಪೀಣ್ಯ ಫ್ಲೈ ಓವರ್‌ನ 120 ಸ್ಪ್ಯಾನ್‌(ಪಿಲ್ಲರ್‌) ನಡುವೆ ಹೊಸದಾಗಿ 240 ಹೊಸ ಕೇಬಲ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಜ.16ರ ರಾತ್ರಿಯಿಂದಲೇ ಲೋಡ್‌ ಟೆಸ್ಟಿಂಗ್‌ (ಸೇತುವೆಯ ಭಾರ ತಡೆದುಕೊಳ್ಳುವ ಸಾಮರ್ಥ್ಯ ಪರೀಕ್ಷೆ) ಪ್ರಾರಂಭವಾಗಿದೆ. ಹೀಗಾಗಿ ಎಲ್ಲ ವಾಹನಗಳಿಗೂ ಮೇಲ್ಸೇತುವೆಯನ್ನು ಬಂದ್‌ ಮಾಡಲಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೀಣ್ಯ ಫ್ಲೈ ಓವರ್‌ನ 120 ಸ್ಪ್ಯಾನ್‌(ಪಿಲ್ಲರ್‌) ನಡುವೆ ಹೊಸದಾಗಿ 240 ಹೊಸ ಕೇಬಲ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಜ.16ರ ರಾತ್ರಿಯಿಂದಲೇ ಲೋಡ್‌ ಟೆಸ್ಟಿಂಗ್‌ (ಸೇತುವೆಯ ಭಾರ ತಡೆದುಕೊಳ್ಳುವ ಸಾಮರ್ಥ್ಯ ಪರೀಕ್ಷೆ) ಪ್ರಾರಂಭವಾಗಿದೆ. ಹೀಗಾಗಿ ಎಲ್ಲ ವಾಹನಗಳಿಗೂ ಮೇಲ್ಸೇತುವೆಯನ್ನು ಬಂದ್‌ ಮಾಡಲಾಗಿದೆ.

ಮಂಗಳವಾರ ರಾತ್ರಿ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಲೋಡ್‌ ಟೆಸ್ಟಿಂಗ್‌ ಆರಂಭವಾಯಿತು. ತಲಾ 30 ಟನ್‌ ತೂಕದ 16 ಟ್ರಕ್‌ಗಳನ್ನು ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿ ಭಾಗದಿಂದ ಕಾರ್ಯಾಚರಣೆಗೆ ಬಳಸಿಕೊಂಡಿದ್ದು, ಪ್ರತಿ ಹಂತವನ್ನೂ ತಜ್ಞರು ದಾಖಲಿಸುತ್ತಿದ್ದಾರೆ. ಇದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಸೇತುವೆಯ ‘ಭವಿಷ್ಯ’ ಬರೆಯಲಿದ್ದಾರೆ.

ಪಾರ್ಲೆ ಜಿ ಭಾಗದಿಂದ ಮೇಲ್ಸೇತುವೆಯ ಒಂದು ಪಿಲ್ಲರ್‌ ಮೇಲೆ 8 ಟ್ರಕ್‌ ಮತ್ತು ಇನ್ನೊಂದು ಪಿಲ್ಲರ್‌ ಮೇಲೆ 8 ಟ್ರಕ್‌ ನಿಲ್ಲಿಸಿ ಒಟ್ಟಾರೆ ಎರಡು ಪಿಲ್ಲರ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಮೊದಲಿಗೆ ಎರಡು ಟ್ರಕ್‌ ಅನ್ನು ಪಿಲ್ಲರ್‌ ಮೇಲ್ಭಾಗದಲ್ಲಿ ನಿಲ್ಲಿಸಲಾಗುವುದು. 

ಒಂದು ಗಂಟೆಯ ಬಳಿಕ ಪಿಲ್ಲರ್‌ನ ತುದಿಯಲ್ಲಿರುವ ಸ್ಪ್ರಿಂಗ್‌ಗಳು ಎಷ್ಟು ಕೆಳ ಭಾಗಕ್ಕೆ ಹೋಗಿವೆ ಎಂಬುದನ್ನು ನಮೂದಿಸಿಕೊಳ್ಳಲಾಗುವುದು.ಗಂಟೆಗೊಮ್ಮೆ ಎರಡು ಟ್ರಕ್‌ ಪ್ರವೇಶ

ನಂತರ ಇನ್ನೆರಡು ಟ್ರಕ್‌ಗಳನ್ನೂ ಪಿಲ್ಲರ್‌ನ ಮೇಲ್ಭಾಗಕ್ಕೆ ಕೊಂಡೊಯ್ದು ಒಟ್ಟು 4 ಟ್ರಕ್‌ಗಳಿದ್ದಾಗ ಸ್ಪ್ರಿಂಗ್‌ಗಳು ಎಷ್ಟು ಕೆಳಕ್ಕೆ ಹೋಗಿವೆ ಎಂದು ನಮೂದಿಸಿಕೊಳ್ಳಲಾಗುವುದು. ಹೀಗೆ ಒಂದೊಂದು ಗಂಟೆಯ ಬಳಿಕ ಎರಡೆರಡು ಟ್ರಕ್‌ಗಳು ಮೇಲ್ಸೇತುವೆ ಪ್ರವೇಶಿಸಲಿದ್ದು, ಎಲ್ಲ ವಿವರವನ್ನೂ ಸಮಗ್ರವಾಗಿ ದಾಖಲಿಸಿಕೊಳ್ಳಲಾಗುವುದು.

ಜ.17ರ ಬೆಳಗಿನವರೆಗೂ ಹೀಗೆ ಲೋಡ್‌ ಟೆಸ್ಟಿಂಗ್‌ ನಡೆಯಲಿದೆ. ನಂತರ ಈ 16 ಟ್ರಕ್‌ಗಳನ್ನೂ ಜ.18ರ ಬೆಳಗಿನವರೆಗೂ 24 ಗಂಟೆ ಮೇಲ್ಸೇತುವೆಯಲ್ಲಿಯೇ ಬಿಡಲಿದ್ದು, ಪರಿಶೀಲನೆ ನಡೆಸಲಾಗುವುದು. ಬಳಿಕ ಗುರುವಾರ ಬೆಳಗಿನಿಂದ ಪ್ರತಿ ಒಂದು ಗಂಟೆಗೊಮ್ಮೆ ಎರಡೆರಡು ಟ್ರಕ್‌ಗಳನ್ನು ಮೇಲ್ಸೇತುವೆಯಿಂದ ಕೆಳಕ್ಕೆ ತರಲಿದ್ದು ಈ ಸಮಯದಲ್ಲಿಯೂ ಪಿಲ್ಲರ್‌ನ ಸ್ಪ್ರಿಂಗ್‌ಗಳ ಚಲನೆಯನ್ನು ಪರಿಶೀಲಿಸಲಾಗುವುದು.

‘ಎಲ್ಲ ಟ್ರಕ್‌ಗಳನ್ನೂ ಮೇಲ್ಸೇತುವೆಯಿಂದ ಕೆಳಕ್ಕೆ ತಂದ ಬಳಿಕ ಜ.19 ರಂದು ಮೇಲ್ಸೇತುವೆಯಲ್ಲಿ 24 ಗಂಟೆ ಯಾವುದೇ ವಾಹನ ಇರದಂತೆ ನೋಡಿಕೊಂಡು ಅದರ ವಿವರಗಳನ್ನೂ ನಮೂದಿಸಿಕೊಳ್ಳಲಾಗುವುದು. ನಂತರ ವಾರದಲ್ಲಿ ಎಲ್ಲ ವಿವರಗಳನ್ನೂ ಸಮಗ್ರವಾಗಿ ಪರಿಶೀಲಿಸಲಾಗುವುದು. 

ಮೇಲ್ಸೇತುವೆಯು ಕ್ಷಮತೆಯಿಂದಿದ್ದರೆ ಎಲ್ಲ ವಿಧದ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತವಾಗಲಿದೆ’ ಎಂದು ಮೂಲಗಳು ತಿಳಿಸಿವೆ.1200 ಕೇಬಲ್‌ ಹಾಕಲು ಒಂದೂವರೆ ವರ್ಷ

ಪೀಣ್ಯ ಫ್ಲೈ ಓವರ್‌ನಲ್ಲಿ ಒಟ್ಟು 120 ಪಿಲ್ಲರ್‌ಗಳಿದ್ದು ಎರಡು ಪಿಲ್ಲರ್‌ಗಳ ನಡುವೆ ತಲಾ 10 ರಂತೆ 1200 ಕೇಬಲ್‌ಗಳಿವೆ. ತುರ್ತು ಸಂದರ್ಭಕ್ಕೆಂದು ಎರಡು ಪಿಲ್ಲರ್‌ ನಡುವೆ ಹೊಸದಾಗಿ 2 ಕೇಬಲ್‌ ಅಳವಡಿಸಲು ಸ್ಥಳಾವಕಾಶ ಖಾಲಿ ಬಿಡಲಾಗಿತ್ತು.

 8 ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವೆ 3 ಕೇಬಲ್‌ ಬಾಗಿದ್ದರಿಂದ 25 ಡಿಸೆಂಬರ್‌ 2021 ರಲ್ಲಿ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧಿಸಿತ್ತು.

ಬಳಿಕ ಅನೇಕ ಪರೀಕ್ಷೆಗಳು ನಡೆದು ಪ್ರಸ್ತುತ ಲಘು ವಾಹನಗಳ ಸಂಚಾರಕ್ಕೆ ಹಗಲಿನಲ್ಲಿ ಮಾತ್ರ ಮೇಲ್ಸೇತುವೆ ಮುಕ್ತವಾಗಿತ್ತು. 120 ಪಿಲ್ಲರ್‌ ನಡುವೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಲಾಗಿದ್ದು ಇದೀಗ ಲೋಡ್‌ ಟೆಸ್ಟಿಂಗ್‌ ನಡೆಸಲಾಗುತ್ತಿದೆ. 

ಈ ಹಿನ್ನೆಲೆಯಲ್ಲಿ ಜ.16 ರಾತ್ರಿ 10 ಗಂಟೆಯಿಂದ ಮೂರು ದಿವಸ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೇಲ್ಸೇತುವೆ ಕ್ಷಮತೆಯಿಂದ ಕೂಡಿದ್ದರೆ ಎಲ್ಲ ಬಗೆಯ ವಾಹನಗಳು ಸಂಚರಿಸಲು ಅವಕಾಶ ನೀಡಿ 1200 ಕೇಬಲ್‌ಗಳನ್ನೂ ಹೊಸದಾಗಿ ಹಂತ ಹಂತವಾಗಿ ಒಂದೂವರೆ ವರ್ಷದಲ್ಲಿ ಬದಲಿಸಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ