ಸರ್ಕಾರಿ ಶಾಲೆಗಳ ದತ್ತು ಸ್ವೀಕರಿಸಿ ಅಭಿವೃದ್ಧಿಗೆ ಯೋಜನೆ: ಸಚಿವ ದಿನೇಶ್ ಗುಂಡೂರಾವ್‌

KannadaprabhaNewsNetwork |  
Published : Aug 31, 2024, 01:33 AM ISTUpdated : Aug 31, 2024, 10:09 AM IST
ಕೆಡಿಪಿ ತ್ರೈಮಾಸಿಕ ಸಭೆ ನಡೆಸುತ್ತಿರುವ ಸಚಿವ ದಿನೇಶ್‌ ಗುಂಡೂರಾವ್‌  | Kannada Prabha

ಸಾರಾಂಶ

ಕೆಡಿಪಿ ತ್ರೈಮಾಸಿಕ ಸಭೆಯ ವೇದಿಕೆಯ ಆಸನ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡರು ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು.

 ಮಂಗಳೂರು  : ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳು, ಕಂಪನಿಗಳ ಸಿಎಸ್‌ಆರ್‌ ನಿಧಿಯಿಂದ ‘ಕ್ರೌಡ್‌ ಸೋರ್ಸಿಂಗ್‌’ ಮೂಲಕ ಸಾರ್ವಜನಿಕ ಸಹಭಾಗಿತ್ವದಡಿ ದತ್ತು ಯೋಜನೆಗೆ ಒತ್ತು ನೀಡುವ ಮಾದರಿ ಕಾರ್ಯಕ್ರಮ ರೂಪಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ನಿರ್ದೇಶನ ನೀಡಿದ್ದಾರೆ.ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ದ.ಕ. ಜಿಲ್ಲಾ ತೈಮಾಸಿಕ ಕೆಡಿಪಿ ಮುಂದುವರಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಬಂಟ್ವಾಳದ ದಡ್ಡಲಕಾಡು ಹಾಗೂ ಬೆಳ್ತಂಗಡಿಯ ಶಿರ್ಲಾಲುವಿನಲ್ಲಿ ಸರ್ಕಾರಿ ಶಾಲೆಗಳನ್ನು ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ದಾನಿಗಳು ದತ್ತು ಪಡೆದು ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದೆ. ಅದೇ ರೀತಿ ಉಳಿದ ಶಾಲೆಗಳನ್ನೂ ಶಾಸಕರ ಅನುದಾನವನ್ನೂ ಬಳಸಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇ ಗೌಡ ಸಲಹೆ ನೀಡಿದರು.

ದಡ್ಡಲಕಾಡಿನಲ್ಲಿ 28 ಮಕ್ಕಳಿದ್ದ ಸರ್ಕಾರಿ ಶಾಲೆಯಲ್ಲಿ ಇದೀಗ 1028 ಮಕ್ಕಳು ಕಲಿಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಮಾದರಿಯಾಗಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತದಿಂದ ಈ ರೀತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರೌಡ್‌ ಸೋರ್ಸಿಂಗ್‌ ಪೋರ್ಟಲ್‌ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

ವೇತನ ನೇರ ಪಾವತಿಗೆ ಚಿಂತನೆ: ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ 186 ಡಿ ಗ್ರೂಪ್‌ ನೌಕರರಿಗೆ ಕಳೆದ ಎರಡು ತಿಂಗಳಿನಿಂದ ವೇತನವಾಗಿಲ್ಲ ಎಂದು ಜಿ.ಪಂ. ನಾಮ ನಿರ್ದೇಶಿತ ಸದಸ್ಯ ಸಂತೋಷ್‌ ಕುಮಾರ್‌ ಗಮನ ಸೆಳೆದರು.

ಜೂನ್‌ ವರೆಗೆ ವೇತನ ಪಾವತಿಯಾಗಿದೆ. ಗುತ್ತಿಗೆ ವಹಿಸಿಕೊಂಡಿರುವವರ ಅವಧಿ ಮುಗಿದಿದ್ದು, ಹೊಸ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ವೆನ್‌ಲಾಕ್‌ ಅಧೀಕ್ಷಕಿ ಮಾಹಿತಿ ನೀಡಿದರು. ಗುತ್ತಿಗೆದಾರರಿಗೆ ಮೂರು ತಿಂಗಳು ಅವಧಿ ವಿಸ್ತರಿಸಲು ಸೂಚನೆ ನೀಡಲಾಗಿದೆ. ಅವರು ಆ ರೀತಿ ಬಿಟ್ಟು ಹೋಗಲು ಆಗದು. ಹೋದಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ರೀತಿ ಗುತ್ತಿಗೆದಾರ ಸಂಸ್ಥೆಗಳಿಂದ ನೌಕರರಿಗೆ ವೇತನ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ನೇರ ಪಾವತಿಗೆ ಕ್ರಮ ವಹಿಸಲು ರಾಜ್ಯ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವರೂ ಆಗಿರುವ ದಿನೇಶ್‌ ಗುಂಡೂರಾವ್‌ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌, ಎಸ್ಪಿ ಯತೀಶ್‌, ಮೆಸ್ಕಾಂ ಎಂಡಿ ಪದ್ಮಾವತಿ, ಡಿಎಫ್‌ಒ ಆ್ಯಂಟನಿ ಮರಿಯಪ್ಪ ಇದ್ದರು.

ವೇದಿಕೆಯ ಆಸನದಲ್ಲಿ ಶಿಷ್ಟಾಚಾರ ಪ್ರಶ್ನೆ!

ಕೆಡಿಪಿ ತ್ರೈಮಾಸಿಕ ಸಭೆಯ ವೇದಿಕೆಯ ಆಸನ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡರು ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು.

ಸಚಿವರು, ಡಿಸಿ, ಜಿ.ಪಂ. ಸಿಇಒ ಹೊರತುಪಡಿಸಿ ಡಿಸಿಎಫ್‌, ಮೆಸ್ಕಾಂ ಎಂಡಿ, ಪೊಲೀಸ್‌ ಕಮಿಷನರ್‌, ಎಸ್ಪಿ ಅವರನ್ನು ಕೂರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭೋಜೇ ಗೌಡರು, ಯಾವ ಶಿಷ್ಟಾಚಾರದಲ್ಲಿ ಇವರನ್ನೆಲ್ಲ ವೇದಿಕೆಯಲ್ಲಿ ಕೂರಿಸಿದ್ದೀರಿ? ಡಿಸಿಗೆ ಶಿಷ್ಟಾಚಾರ ಬಗ್ಗೆ ಮಾಹಿತಿ ಇದೆಯಾ ಎಂದು ತರಾಟೆಗೆ ತೆಗೆದುಕೊಂಡರು. ಪದ್ಧತಿ ಪ್ರಕಾರವೇ ಅವರನ್ನು ಕೂರಿಸಲಾಗಿದೆ ಎಂದು ಡಿಸಿ ಸಮಜಾಯಿಸಿ ನೀಡಿದರೂ ತೃಪ್ತರಾಗದ ಭೋಜೇ ಗೌಡರನ್ನು ಸಮಾಧಾನಿಸಲು ಯತ್ನಸಿದ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾಗೂ ಕ್ಲಾಸ್‌ ತೆಗೆದುಕೊಂಡರು. ಬಳಿಕ ಸಚಿವ ದಿನೇಶ್ ಗುಂಡೂರಾವ್‌ ಅವರು ಮುಂದೆ ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿ ಸಭೆ ಮುಂದುವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ