ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ವಾರ್ತಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಟ್ಟಾರೆಯಾಗಿ 2057ರ ಜನಸಂಖ್ಯೆ ಆಧರಿಸಿ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಮುಂಬರುವ ಎರಡ್ಮೂರು ವರ್ಷಗಳಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ. ಕೇವಲ ಬಿಜೆಪಿ ನಗರಸೇವಕರ ವಾರ್ಡ್‌ಗಳಷ್ಟೇ ಅಲ್ಲ, ಮಹಾನಗರದ ಎಲ್ಲ 58 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕೆಂದು ಮೇಯರ್ ಹಾಗೂ ಉಪಮೇಯರ್‌ಗೆ ಸಲಹೆ ನೀಡಿದರು.
ರಾಜಕಾರಣವನ್ನು ದೂರವಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದ ಅವರು, ರಾಜಕಾರಣಿಗಳನ್ನು ಹೊಗಳಿದರೆ ಅಭಿವೃದ್ಧಿ ಆಗುವುದಿಲ್ಲ. ರಾಜಕಾರಣಿಗಳ ತಪ್ಪುಗಳ ಮೇಲೆಯೂ ಬೆಳಕು ಚೆಲ್ಲುವ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಪತ್ರಕರ್ತರಿಗೆ ಸಲಹೆ ನೀಡಿದರು.ಮೇಯರ್ ಮಂಗೇಶ್ ಪವಾರ ಮಾತನಾಡಿ, ಸದ್ಯಕ್ಕೆ ಮಹಾನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ನೀರಿನ ಲಭ್ಯತೆ ಸಮರ್ಪಕವಾಗಿದೆ. ಆದರೆ, ವಿದ್ಯುತ್ ಸಮಸ್ಯೆ, ತಾಂತ್ರಿಕ ದೋಷ ಹಾಗೂ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೇ, ಉತ್ತರ ಮತ್ತು ದಕ್ಷಿಣ ಮತಕ್ಷತ್ರಗಳಿಗೆ ತಲಾ ಹದಿನಾಲ್ಕು ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಉಪಮೇಯರ್ ವಾಣಿ ಜೋಶಿ ಮಾತನಾಡಿ, ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಾವು ಮಹಾನಗರದ ಎಲ್ಲ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಜನತೆಗೆ ತಲುಪಿಸಲು ಮಾಧ್ಯಮದ ಸಹಕಾರವೂ ಅಗತ್ಯವಾಗಿದೆ. ಎಲ್ಲರೂ ಮಹಾನಗರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ನೂತನವಾಗಿ ಆಯ್ಕೆಯಾದ ಮೇಯರ್ ಮಂಗೇಶ್ ಪವಾರ, ಉಪಮೇಯರ್ ವಾಣಿ ಜೋಶಿ ಅವರನ್ನು ಬೆಳಗಾವಿ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.