ಕೊಪ್ಪಳ:
ಮೀನುಗಾರಿಕೆ ಇಲಾಖೆಯ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರುಕಾ ಹತ್ತಿರ ಇರುವ ಮೀನುಗಾರಿಕೆ ಇಲಾಖೆಯ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯ ಹಾಗೂ ಮೀನು ಮರಿ ಉತ್ಪಾದನೆ ಪರಿಶೀಲಿಸಿ, ನಂತರ ಮಾತನಾಡಿದರು.
ಕೇಂದ್ರಕ್ಕೆ ಅವಶ್ಯವಿರುವ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿದಲ್ಲಿ ಜಿಲ್ಲಾ ಪಂಚಾಯಿತಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಡಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಇಲಾಖೆಯಿಂದ ಆಗಬೇಕಾಗಿರುವ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಆಯುಕ್ತರ ಕಚೇರಿಯಿಂದ ಅನುಮೋದನೆ ಪಡೆಯಲು ಕ್ರಮವಹಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.ಬರುವ ಎರಡು ವರ್ಷದೊಳಗಾಗಿ ಮಾದರಿ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರವನ್ನಾಗಿ ನಿರ್ಮಿಸಲಾಗುವುದು ಎಂದ ಅವರು, ಈ ಭಾಗದ ಅತೀ ದೊಡ್ಡ ಮೀನು ಮರಿ ಉತ್ಪಾದನಾ ಕೇಂದ್ರವಾಗಿದ್ದು ಈ ಮುಂಚೆ ಇದ್ದ ಮೀನು ಮರಿ ಉತ್ಪಾದನೆ ಮಾದರಿ ಕೇಂದ್ರವಾಗಿ ಮಾರ್ಪಡಿಸಲಾಗುವುದು ಎಂದರು.
ದ್ರಾಕ್ಷಿ ಮೇಳ ಮತ್ತು ಜೇನು ಮೇಳಕ್ಕೆ ಭೇಟಿ:ನಗರದಲ್ಲಿ ತೋಟಗಾರಿಕೆ ಏರ್ಪಡಿಸಿರುವ ದ್ರಾಕ್ಷಿ ಮತ್ತು ಜೇನು ಮೇಳಕ್ಕೆ ಭೇಟಿ ನೀಡಿ ಮೇಳದಲ್ಲಿ ರೈತರು ಬೆಳೆದ ದ್ರಾಕ್ಷಿ, ಜೇನು, ದಾಳಿಂಬೆ ಇತ್ಯಾದಿ ಹಣ್ಣುಗಳ ಬೆಳೆದು ಮಾರಾಟವಾಗುತ್ತಿರುವ ಕುರಿತು ರೈತರು ಮತ್ತು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರೊಂದಿಗೆ ಚರ್ಚಿಸಿದರು.
ಈ ವೇಳೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಭಾಗ್ಯಶ್ರೀ, ತಾಪಂ ಇಒ ದುಂಡಪ್ಪ ತುರಾದಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಜನೀಶ, ಬಸವರಾಜ, ಗ್ರಾಪಂ ಅಧ್ಯಕ್ಷ ರವಿಕುಮಾರ ಚೆಲಸಾನಿ, ಉಪಾಧ್ಯಕ್ಷ ವೆಂಕಟೇಶ ಚನ್ನದಾಸರ, ಗ್ರಾಪಂ ಸದಸ್ಯರಾದ ಶೇಷನಗೌಡ, ಪಿಡಿಒ ಮಂಜುಳಾ ಪಾಟೀಲ್, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಪಂ ಕರವಸೂಲಿಗಾರ ಮಂಜುನಾಥ ಹಾಜರಿದ್ದರು.