ಕಾಡಂಚಿನ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ: ಬಡಗಲಪುರ ನಾಗೇಂದ್ರ

KannadaprabhaNewsNetwork |  
Published : Sep 21, 2024, 01:49 AM IST
ಕಾಡಂಚಿನ ಗ್ರಾಮದ ಜನತೆಯನ್ನು ಒಕ್ಕಲಬ್ಬಿಸುವ ಹುನ್ನಾರ- ಬಡಗಲಪುರ ನಾಗೇಂದ್ರ | Kannada Prabha

ಸಾರಾಂಶ

ಕಾಡಂಚಿನ ಗ್ರಾಮದ ಜನತೆಯನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ. ರೈತ ಸಂಘ ಇದಕ್ಕೆ ತೀವ್ರವಾಗಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಹನೂರಿನಲ್ಲಿ ಆಲಂಬಾಡಿ, ಪುದುಕಾಡು, ಆತೂರು ಗ್ರಾಮಗಳಲ್ಲಿ ನೂತನ ಗ್ರಾಮ ಘಟಕದ ನಾಮಪಾಲಕ ಉದ್ಘಾಟನೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕಾನೂನು ತಿದ್ದುಪಡಿ ಮಾಡಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತು ತೆಗೆಯಲು ಅವಕಾಶ ಕಲ್ಪಿಸಿದೆ. ಮತ್ತೊಂದೆಡೆ ಕಾಡಂಚಿನ ಗ್ರಾಮದ ಜನತೆಯನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ. ರೈತ ಸಂಘ ಇದಕ್ಕೆ ತೀವ್ರವಾಗಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.ಹನೂರು ತಾಲೂಕಿನ ಗಡಿ ಗ್ರಾಮವಾದ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಆಲಂಬಾಡಿ, ಪುದುಕಾಡು, ಆತೂರು ಗ್ರಾಮಗಳಲ್ಲಿ ನೂತನ ಗ್ರಾಮ ಘಟಕದ ನಾಮಪಾಲಕ ಉದ್ಘಾಟನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಂಡವಾಳ ಶಾಹಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಒಂದು ಲಕ್ಷ ಎಕರೆ ಭೂಮಿಯನ್ನು ಖನಿಜ ಸಂಪತ್ತು ತೆಗೆಯಲು ಪ್ರತ್ಯೇಕ ಕಾಯಿದೆ ಕಾನೂನು ತಂದು ಅವಕಾಶ ಕಲ್ಪಿಸಿದೆ. ಜೊತೆಗೆ ಸಂಡೂರು ಗ್ರಾಮದ ಜಿಂದಾಲ್ ಕಂಪನಿಗೆ 3676 ಎಕರೆ ಜಮೀನು ಕಾಯ್ದೆ ಬದಲಾವಣೆ ಮಾಡಿ ಸರ್ಕಾರ ಬಂಡವಾಳ ಶಾಹಿಗಳಿಗೆ ಅವಕಾಶ ಕಲ್ಪಿಸಿದೆ. ಕಾಡಂಚಿನ ಗ್ರಾಮಗಳ ನೂರಾರು ವರ್ಷಗಳಿಂದ ತಲತಲಾಂತರದಿಂದ ವಾಸ ಮಾಡುವ ಬಡ ರೈತ ಕುಟುಂಬಗಳಿಗೆ ಅರಣ್ಯದಂಚಿನ ಗ್ರಾಮಗಳಿಂದ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಕಾಯ್ದೆ ಉಪಯೋಗಿಸಿ ಈಗಾಗಲೇ ಈ ಭಾಗದ ಜನರಿಗೆ ಎರಡು ನೋಟಿಸ್ ಜಾರಿಗೊಳಿಸಿದ್ದಾರೆ.ಏನೂ ತಿಳಿಯದ ಮುಗ್ಧ ಜನರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಯುತ್ತಿದೆ. ಹೀಗಾಗಿ ರಾಜ್ಯ ರೈತ ಸಂಘ ಹನೂರು ತಾಲೂಕಿನ ವಿವಿಧ ಗ್ರಾಮಗಳ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಈಗಾಗಲೇ ರೂಪರೇಷೆಗಳನ್ನು ಪಟ್ಟಿ ಮಾಡಿದೆ. ಅರಣ್ಯ ಇಲಾಖೆ ಇಲ್ಲಿನ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದುವರೆದರೆ ರಾಜ್ಯ ಸಂಘ ಇಡೀ ಕರ್ನಾಟಕ ರಾಜ್ಯಾದ್ಯಂತ ಇದರ ಬಗ್ಗೆ ಹೋರಾಟ ಸಮಿತಿ ವತಿಯಿಂದ ಮಾಡಲಾಗುತ್ತದೆ. ಹೀಗಾಗಿ ಇಲ್ಲಿನ ಶಾಸಕರು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಇಲ್ಲಿನ ಕಾಡಂಚಿನ ಗಡಿ ಗ್ರಾಮದಲ್ಲಿರುವ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಇಲ್ಲಿನ ಜನತೆ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆ ವಲಯಗಳನ್ನು ರೂಪಿಸಿಕೊಂಡು ಬಡ ಜನತೆಯನ್ನು ಒಕ್ಕಲೆಬ್ಬಿಸಲು ಕಾನೂನು ರೂಪಿಸುತ್ತಿದೆ. ಬಂಡವಾಳ ಶಾಹಿಗಳಿಗೆ ಕಾನೂನನ್ನು ಬದಲಾವಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಕಲ್ಪಿಸುತ್ತಿದೆ. ಬಡ ಜನತೆ ಮೇಲೆ ಅರಣ್ಯ ಇಲಾಖೆ ಮುಖಾಂತರ ಮಾಡುತ್ತಿರುವ ದುರ್ನಡತೆ ಕಿರುಕುಳ ಸಹಿಸುವುದಿಲ್ಲ. ಮುಂದೆ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಜನತೆಯನ್ನು ಒಕ್ಕಲೆಬ್ಬಿಸಲು ಮುಂದಾದರೆ ಜಿಲ್ಲಾದ್ಯಂತ ಇರುವ ಸಂಘಟನೆ ಇದನ್ನು ಖಂಡಿಸಿ ಹೋರಾಟದ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆಗೆ ಎಚ್ಚರಿಸಿದರು.

ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ, ತಾಲೂಕಿನಲ್ಲಿ ಅರಣ್ಯ ಪ್ರದೇಶದಿಂದ ಕೂಡಿರುವ ಬಹುತೇಕ ಗ್ರಾಮಗಳು ಅರಣ್ಯದಂಚಿನಲ್ಲೇ ಇರುವುದರಿಂದ ರೈತರು ಇಲ್ಲಿನ ಜನಸಾಮಾನ್ಯರು ಕಾಡುಪ್ರಾಣಿಗಳ ಹಾವಳಿಯಿಂದ ಈಗಾಗಲೇ ತತ್ತರಿಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಸಹ ಅಧಿಕಾರಿಗಳು ಸಿಬ್ಬಂದಿ ಜನಸಾಮಾನ್ಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯನ್ನು ಸಂಘಟನೆ ಸಹಿಸುವುದಿಲ್ಲ ಹೋರಾಟದ ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೆಂದರ್, ಹನೂರು ತಾಲೂಕು ಘಟಕ ಅಧ್ಯಕ್ಷ ಅಮ್ಜದ್ ಖಾನ್, ಗುಂಡ್ಲುಪೇಟೆ ಯುವ ಘಟಕದ ಅಧ್ಯಕ್ಷ ಭರತ್, ಹನೂರು ತಾಲೂಕು ಗೌರವಾಧ್ಯಕ್ಷ ರಾಜಣ್ಣ ಮತ್ತು ರೈತ ಮುಖಂಡರಾದ ಪಳನಿಸ್ವಾಮಿ, ವಸಂತ, ವೇಲು ಸ್ವಾಮಿ, ಸೂರ್ಯ, ರತ್ನವೇಲು, ತಂಗವೇಲು, ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!