ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹೆಚ್ಚು ಬೇಡಿಕೆಯಿದ್ದು, ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಳ್ಳುವಾಗ ಸರ್ಕಾರಿ ಕಾಲೇಜುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ರಾಜ್ಯದಲ್ಲಿ 17 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಅದೇ ರೀತಿ ಬೇಡಿಕೆ ಬರುವಂತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ವೈದ್ಯಕೀಯ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಪಂ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 8.20 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೇಡಿಯಾಲಜಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳೊಂದಿಗೆ ಸರ್ಕಾರಿ ಜಿಲ್ಲಾಸ್ಪತ್ರೆಗಳು ಸಂಯೋಜನೆಗೊಂಡಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಕಲಿಯಲು ಸಾಕಷ್ಟು ಅವಕಾಶಗಳಿರುತ್ತವೆ. ಈ ಕಾರಣದಿಂದ ವೈದ್ಯಕೀಯ ಸೀಟು ಆಯ್ಕೆ ವೇಳೆ ವಿದ್ಯಾರ್ಥಿಗಳು ಮೊದಲ ಆಯ್ಕೆಯಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಇಂಜಿನಿಯರಿಂಗ್ ಸೀಟು ಆಯ್ಕೆ ವೇಳೆ ವಿದ್ಯಾರ್ಥಿಗಳು ಮೊದಲ ಆದ್ಯತೆಯನ್ನು ಖಾಸಗಿ ಕಾಲೇಜುಗಳಿಗೆ ನೀಡುತ್ತಾರೆ. ನಂತರ ಸರ್ಕಾರಿ ಕಾಲೇಜುಗಳ ಕಡೆ ನೋಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೂ ಮೊದಲ ಆಯ್ಕೆಯ ಬೇಡಿಕೆ ಬರುವಂತೆ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಉನ್ನತೀಕರಿಸುವ ಚಿಂತನೆ ನಡೆದಿದೆ. ರಾಜ್ಯದ 17 ಸರ್ಕಾರಿ ಕಾಲೇಜುಗಳಿಗೂ ಬೇಡಿಕೆ ಬರುವಂತೆ ಮಾಡುವ ಉದ್ದೇಶ ಸರ್ಕಾರಕ್ಕಿದ್ದು, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂದಿನ ಹತ್ತು ತಿಂಗಳಲ್ಲಿ ಜಿಲ್ಲಾಸ್ಪತ್ರೆಗೆ ಎಂಆರ್ ಐ ಸೌಲಭ್ಯ:ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೇಡಿಯಾಲಜಿ ವಿಭಾಗದ ಕಟ್ಟಡ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿದೆ. ನೂತನವಾಗಿ ನಿರ್ಮಿಸಲಾಗುವ ರೇಡಿಯಾಲಜಿ ಕಟ್ಟಡದಲ್ಲಿ ಸುಸಜ್ಜಿತ ಅತ್ಯಾಧುನಿಕ ಪರೀಕ್ಷಾ ಪ್ರಯೋಗಾಲಯಗಳು, ಎಂಆರ್ ಐ, ಸಿಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕಾನಿಂಗ್, ಎಕೋ, ಟಿಎಂಟಿ ಹಾಗೂ ಎಲ್ಲ ರೀತಿಯ ರಕ್ತ ಪರೀಕ್ಷೆಗಳನ್ನು ಮಾಡುವ ಸೌಲಭ್ಯ ಇರುತ್ತದೆ. ಹತ್ತು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿದಲ್ಲಿ ರೋಗಿಗಳ ಪಾಲಿಗೆ ವೈದ್ಯರು ದೇವರಾಗುತ್ತಾರೆ. ಯಾವ ರೋಗಿಯಿಂದಲೂ ಹಣ ಪಡೆಯದೇ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದರು.ಚಿಕ್ಕಬಳ್ಳಾಪುರ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಡೀಸಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್.ಪಿ. ಕುಶಲ್ ಚೌಕ್ಸೆ, ಎಡೀಸಿ ಡಾ. ಎನ್.ಭಾಸ್ಕರ್, ಎಎಸ್ ಪಿ. ಆರ್.ಐ.ಖಾಸಿಂ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ತಹಸೀಲ್ದಾರ್ ಅನಿಲ್, ಡಿಎಚ್ಒ ಡಾ. ಮಹೇಶ್ ಕುಮಾರ್, ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾದೇವಿ, ನಿವಾಸಿ ವೈದ್ಯಾಧಿಕಾರಿ ಡಾ. ರಮೇಶ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.