ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಹೊರವಲಯದಲ್ಲಿನ ರೆಸಾರ್ಟ್‌ನಲ್ಲಿ ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್ ನೂತನ ವೆಬ್ ಸೈಟ್, ಲಾಂಛನ ಅನಾವರಣಗೊಳಿಸಿ ಜಿಲ್ಲಾಧಿಕಾರಿ ಮಾತನಾಡಿದರು.
ಕೊಡಗಿನ ನಿಸರ್ಗ ಸಂಪತ್ತು, ಶ್ರೀಮಂತ ಸಂಸ್ಕೃತಿಯನ್ನೂ ಪ್ರವಾಸೋದ್ಯಮಿಗಳು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನ ನೀಡಬೇಕೆಂದು ಅವರು ಕಿವಿಮಾತು ಹೇಳಿದ್ದಾರೆ.ಕುಶಾಲನಗರ- ಮಡಿಕೇರಿ ನಡುವಿನ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಖಾಸಗಿ ಜಾಗ ದೊರಕಿದರೆ, ಶೌಚಾಲಯ ಮಿನಿ ರೆಸ್ಟೋರೆಂಟ್ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಸಾಧ್ಯವಿದೆ. ಸದ್ಯದಲ್ಲಿಯೇ ಮೈಸೂರು- ಕುಶಾಲನಗರ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾದ ನಂತರ ಕುಶಾಲನಗರದಲ್ಲಿ ವಾಹನ ದಟ್ಟಣೆ ಇಳಿಮುಖವಾಗುವ ಸಾಧ್ಯತೆಯಿದೆ ಎಂದರು.
ಕಳಪೆ ಗುಣಮಟ್ಟದ, ನಕಲಿ ಉತ್ಪನ್ನಗಳು ಕೊಡಗು ಹೆಸರಿನಲ್ಲಿ ಮಾರಾಟವಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರತ್ಯೇಕವಾದ ಕೊಡಗು ಬ್ರಾಂಡ್ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ನಿಟ್ಟಿನಲ್ಲಿಯೂ ಗಮನ ನೀಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರವಾಸೋದ್ಯಮಿ ಮತ್ತು ಸಂಘದ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಮಾತನಾಡಿ, ಕುಶಾಲನಗರಕ್ಕೆ ರೈಲ್ವೇ ಮಾರ್ಗ ಸಂಪರ್ಕ ಯೋಜನೆ ದಶಕಗಳಿಂದ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಬೇಕು. ಕೊಡಗಿನಲ್ಲಿ ಹಲವಾರು ತಾಣಗಳಿದ್ದು, ಇವುಗಳಿಗೆ ಕಾಯಕಲ್ಪ ನೀಡಿದ್ದಲ್ಲಿ, ಈಗಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ದಟ್ಟಣೆ ಕಡಮೆಯಾಗಲು ಸಾಧ್ಯವಿದೆ ಎಂದೂ ಸಲಹೆ ನೀಡಿದರು.
ಪ್ರವಾಸೋದ್ಯಮಿ ಮೋಹನ್ ದಾಸ್ ಮಾತನಾಡಿ, ಪರಿಸರ ಸ್ನೇಹಿಯಾಗಿ ಕಾಫಿ ಪ್ರವಾಸೋದ್ಯಮವನ್ನು ಕೊಡಗಿನ ಕಾಫಿ ತೋಟಗಳಲ್ಲಿ ಪರಿಚಯಿಸಲು ಅವಕಾಶ ಇದೆ ಎಂದರು. ಪ್ರವಾಸೋದ್ಯಮಿ ಜಯಚಿಣ್ಣಪ್ಪ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಮತ್ತಷ್ಟು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.
ಪ್ರವಾಸೋದ್ಯಮಿ ಮದನ್ ರೂಪಿಸಿದ ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ನೂತನ ವೆಬ್ ಸೈಟನ್ನು ಜಿಲ್ಲಾಧಿಕಾರಿ ಅನಾವರಣಗೊಳಿಸಿದರು. ನಗರಸಭೆಯ ಪೌರಾಯುಕ್ತ ರಮೇಶ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಸಪ್ಪ, ಅಸೋಸಿಯೇಷನ್ ಖಜಾಂಜಿ ಸಾಗರ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.