ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಚಾರ್ಮಾಡಿ ಅಥವಾ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ 100 ಎಕರೆ ಜಾಗ ಗುರುತಿಸಿ ಆನೆ ಕ್ಯಾಂಪ್ ರಚಿಸುವ ಯೋಜನೆಗೆ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.ಚಾರ್ಮಾಡಿ ಗ್ರಾ.ಪಂ. ಸಭಾಭವನದಲ್ಲಿ ಮಂಗಳವಾರ ಜರುಗಿದ ಪಂಚಾಯಿತಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಸ್ಥ ರಾಮಣ್ಣ ಭಂಡಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ವಿಪರೀತವಾಗಿರುವ ಕುರಿತು ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ಶಾಸಕರು, ಇದಲ್ಲದೆ ಇಲ್ಲಿನ ಪರಿಸರಗಳಲ್ಲಿ ನೇತಾಡುವ ಸೋಲಾರ್ ಬೇಲಿ, ಅಗತ್ಯ ಸ್ಥಳಗಳಲ್ಲಿ ಆನೆಗಳು ನುಸುಳದಂತೆ ತಡೆಗೋಡೆಗಳನ್ನು ರಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ಚಾರ್ಮಾಡಿ ಘಾಟಿ ಆರಂಭ ಸ್ಥಳದಲ್ಲಿ ಬೇರೆ ಕಡೆ ಹಿಡಿದ ವಿಷದ ಹಾವು, ಕೋತಿಗಳನ್ನು ತಂದು ಬಿಡುವುದರಿಂದ ಅವು ಸಮೀಪದ ಮನೆಗಳವರೆಗೂ ಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಚಾರ್ಮಾಡಿಯಲ್ಲಿ ಹೆಚ್ಚಿನ ಎಕ್ಸ್ ಪ್ರೆಸ್ ಬಸ್‌ಗಳಿಗೆ ನಿಲುಗಡೆ ಇದ್ದರೂ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಮಂಗಳೂರಿನಿಂದ ಚಾರ್ಮಾಡಿಗೆ ಎರಡು ಗಂಟೆಗೆ ಒಂದರಂತೆ ಬಸ್ ಸೌಲಭ್ಯ ಕಲ್ಪಿಸಬೇಕು. ಶನಿವಾರ ಮಧ್ಯಾಹ್ನ ಹಾಗೂ ಉಳಿದ ದಿನಗಳಲ್ಲಿ ಸಂಜೆ 4.30ರ ಬಳಿಕ ಚಾರ್ಮಾಡಿಗೆ ಉಜಿರೆಯಿಂದ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಕೃಷ್ಣ ಭಟ್ ತಿಳಿಸಿದರು. ಈ ಬಗ್ಗೆ ಡಿಪೋ ಮ್ಯಾನೇಜರ್ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಯಿತು. ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ವಾರದ ಮೂರು ದಿನ ಮಾತ್ರ ಲಭ್ಯವಿರುತ್ತಾರೆ. ಇವರಿಗೆ ಮುಂಡಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಜವಾಬ್ದಾರಿ ನೀಡಿರುವುದರಿಂದ ಇಲ್ಲಿನ ಗ್ರಾಮಸ್ಥರಿಗೆ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಜಿ ವ್ಯವಸ್ಥೆ ಇದ್ದರೂ ಅದನ್ನು ಮಾಡುತ್ತಿಲ್ಲ ಎಂಬ ಕುರಿತು ಶಾಸಕರ ಗಮನಕ್ಕೆ ತರಲಾಯಿತು. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಶಾಸಕರು ತಿಳಿಸಿದರು.ಚಾರ್ಮಾಡಿಯಲ್ಲಿ ಅಂಗನವಾಡಿಗೆ ಮೀಸಲಿಟ್ಟ ಜಾಗದಲ್ಲಿ ಕಟ್ಟಡ ನಿರ್ಮಿಸುವ ಕುರಿತು ಅಂಗನವಾಡಿಗಳಲ್ಲಿ ಎಲ್‌ಕೆಜಿ ಆರಂಭವಾಗಿದ್ದು ಹೆಚ್ಚುವರಿ ಕಾರ್ಯಕರ್ತೆಯರನ್ನು ನೇಮಿಸಬೇಕು. ಗಾಂಧಿನಗರದಲ್ಲಿ ಕಳೆದ ವರ್ಷ ಮಳೆಗೆ ಮನೆ ಹಾನಿಯಾಗಿದ್ದು ಪರಿಹಾರ ಬಿಡುಗಡೆಗೊಳ್ಳದ ಕುರಿತು, ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಕೆ 94ಸಿ, 9/11 ಕಸ್ತೂರಿರಂಗನ್ ವರದಿ ಇತ್ಯಾದಿ ವಿಚಾರಗಳ ಬಗ್ಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದರು. ಗ್ರಾಪಂ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷ ನೀಲು, ಮುಂಡಾಜೆ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ ನಾರಾಯಣ ರಾವ್, ಉಪ ತಹಸೀಲ್ದಾರ್ ಜಯಾ, ಪಂಚಾಯಿತಿ ಸದಸ್ಯರು ಇಲಾಖಾಧಿಕಾರಿಗಳು ಇದ್ದರು. ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು. ಪಿಡಿಒ ಪುರುಷೋತ್ತಮ ಜಿ. ಮತ್ತು ಪಂಚಾಯಿತಿ ಸಿಬ್ಬಂದಿ ಸಹಕರಿಸಿದರು.