ಯಲ್ಲಾಪುರ: ಮನುಷ್ಯತ್ವದ ಆಶಯಗಳನ್ನು ಬಿಂಬಿಸುವ ಕೆಲಸವು ಸಾಂಸ್ಕೃತಿಕ ಪರಿಸರದಿಂದ ಮಾತ್ರ ಸಾಧ್ಯವಾಗುವುದು ಎಂದು ವಜ್ರಳ್ಳಿಯ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಗುಣ ಜೀವನವನ್ನು ಸಾರ್ಥಕಗೊಳಿಸುತ್ತದೆ. ಸಮಾಜದ ಜತೆ ಬೆರೆಯುವ ಮನಸ್ಸು ಮಕ್ಕಳಲ್ಲಿ ಮೂಡಿಸಬೇಕಿದೆ. ಸಾಂಸ್ಕೃತಿಕ ವಾತಾವರಣ ನಮ್ಮ ಅಂತರಂಗದ ಶುದ್ಧಿಗೆ ಕಾರಣವಾಗುತ್ತದೆ ಎಂದರು.
ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ.ಸಿ. ಗಾಂವ್ಕರ್, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಪಂಚಾಯಿತಿ ಉಪಾಧ್ಯಕ್ಷೆ ಗಂಗಾ ಕೋಮಾರ, ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಉಪಸ್ಥಿತರಿದ್ದರು.ಕಾರವಾರದ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕತೆಯ ಒತ್ತಡದಲ್ಲಿ ಮಕ್ಕಳ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತಿದೆ. ಮಕ್ಕಳ ಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಲು ಚಿಗುರು ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ. ಸುಪ್ತ ಪ್ರತಿಭೆಗಳಿಗೆ ವೇದಿಕೆಯ ಅವಕಾಶ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶ. ಈ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿ ಉಳಿಸುವ ಪ್ರಯತ್ನ ಇದಾಗಿದೆ ಎಂದರು.
ಶೈಕ್ಷಣಿಕ ಸಾಧನೆಯ ಪ್ರತಿಭೆ ದೀಕ್ಷಾ ದತ್ತಾತ್ರೇಯ ಭಟ್ಟ ಅವರನ್ನು ಸಂಘಟನೆಯಿಂದ ಪುರಸ್ಕರಿಸಲಾಯಿತು.ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಆಶಯ ನುಡಿಗಳನ್ನು ಆಡಿದರು. ಕಾರ್ಯದರ್ಶಿ ಮಂಜುನಾಥ ಗಾಂವ್ಕರ್ ಮೂಲೆಮನೆ ವಂದಿಸಿದರು. ಶಿಕ್ಷಕರಾದ ಸರೋಜಾ ಭಟ್ಟ, ಚಿದಾನಂದ ಹಳ್ಳಿ, ಗಿರೀಶ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಣತಿ ಗಾಂವ್ಕರರ ಹಿಂದುಸ್ತಾನಿ ಸಂಗೀತ, ಶಾಲಾ ವಿದ್ಯಾರ್ಥಿಗಳ ಜಾನಪದ ನೃತ್ಯ, ಸುಗಮ ಸಂಗೀತ, ಕಾರವಾರದ ಕಲಾ ತಂಡಗಳ ನೃತ್ಯ ರೂಪಕ, ಸರ್ವೋದಯ ಪ್ರೌಢಶಾಲೆಯ ಮಕ್ಕಳಿಂದ ಅಮ್ಮ ನಾಟಕ, ಅಕ್ಷರಾ ನಾಗರಾಜ ಹೆಗಡೆ ಕೋಣೆಮನೆಯಏಕಪಾತ್ರಾಭಿನಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.