ಕನ್ನಡಪ್ರಭ ವಾರ್ತೆ ಪುತ್ತೂರು
ಈ ಬಾರಿಯ ಜೋರಾದ ಮಳೆಯಿಂದಾಗಿ ಪುತ್ತೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳು ಹೊಂಡ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿತ್ತು. ಇದೀಗ ಪುತ್ತೂರಿನ ನಗರಸಭಾ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭಗೊಂಡಿದೆ. ನಗರದ ದರ್ಬೆ ಮತ್ತು ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಬಳಿಯಲ್ಲಿ ಉಂಟಾಗಿರುವ ರಸ್ತೆಯಲ್ಲಿ ಹೊಂಡಗಳಿಗೆ ಇಂಟರ್‌ಲಾಕ್ ಅಳವಡಿಸಿ ದುರಸ್ತಿ ಕಾಮಗಾರಿ ಮಂಗಳವಾರ ಆರಂಭಗೊಂಡಿದೆ.ನಗರಸಭೆ ನಿಧಿ ಸುಮಾರು ರು. ೧೦ ಲಕ್ಷ ವೆಚ್ಚದಲ್ಲಿ ದರ್ಬೆ ಉಷಾ ಮೆಡಿಕಲ್ ಬಳಿ, ದರ್ಬೆ ವೃತ್ತದ ಬಳಿ ಮತ್ತು ಧನ್ವಂತರಿ ಆಸ್ಪತ್ರೆಯ ಬಳಿ ರಸ್ತೆ ಗುಂಡಿಗಳನ್ನು ತಂತ್ರಜ್ಞಾನ ಬಳಸಿ ಇಂಟರ್ ಲಾಕ್ ಅಳವಡಿಕೆ ಮಾಡಲಾಗುತ್ತಿದೆ. ತೀರಾ ಹದೆಗೆಟ್ಟ ಗುಂಡಿ ತುಂಬಿದ ರಸ್ತೆಗಳಿಗೆ ಇಂಟರ್ ಲಾಕ್ ಅಳವಡಿಕೆ ಮೂಲಕ ದುರಸ್ತಿ ಮಾಡುವ ಹೊಸ ಪ್ರಯೋಗವಾಗಿದೆ. ಇದು ಯಶಸ್ವಿಯಾದಲ್ಲಿ ಮುಂದೆ ಇನ್ನೂ ಕೆಲವು ಕಡೆ ತೀರಾ ಹದಗೆಟ್ಟ ರಸ್ತೆಗಳಿಗೂ ಇದೇ ವ್ಯವಸ್ಥೆಯಲ್ಲಿ ಮಳೆಗಾಲದಲ್ಲೇ ದುರಸ್ಥಿ ಮಾಡಲಾಗುವುದು ಎಂದು ನಗರರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ ತಿಳಿಸಿದ್ದಾರೆ. ಶಾಸಕ ಅಶೋಕ್ ರೈ ಸೂಚನೆ:ಕಳೆದ ಭಾನುವಾರ ನಗರದ ರಸ್ತೆ ಹೊಂಡಗಳನ್ನು ವೀಕ್ಷಣೆ ಮಾಡಿದ್ದ ಶಾಸಕ ಅಶೋಕ್ ಕುಮಾರ್ ರೈ ತಕ್ಷಣವೇ ರಸ್ತೆ ದುರಸ್ತಿಗೊಳಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ್ದ ಶಾಸಕರು ಮುಂದಿನ ಎರಡು ಮೂರು ದಿನಗಳಲ್ಲಿ ಗುಂಡಿ ಬಿದ್ದಿರುವ ದರ್ಬೆ ಮತ್ತು ಕಲ್ಲಾರೆಯಲ್ಲಿ ಇಂಟರ್‌ಲಾಕ್ ಅಳವಡಿಸಿ ಗುಂಡಿ ಮುಚ್ಚುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದರು.ಲೋಕೋಪಯೋಗಿ ಇಲಾಖೆಯ ರಸ್ತೆ ಗುಂಡು ಮುಚ್ಚಲೂ ಸರ್ಕಾರದಿಂದ ಅನುದಾನ ಬಂದಿದೆ. ಮಳೆ ಕಡಿಮೆ ಆದ ತಕ್ಷಣ ಈ ಕಾಮಗಾರಿ ನಡೆಸಲಾಗುವುದು. ಈಗಾಗಲೇ ನಗರದ ರಸ್ತೆ ದುರಸ್ತಿಗೆ ಸರ್ಕಾರದಿಂದ ರು. ೫೦ ಕೋಟಿ ಮತ್ತು ಗ್ರಾಮಾಂತರ ರಸ್ತೆಗಳ ದುರಸ್ತಿಗೆ ರು. ೨೦ ಕೋಟಿ ಅನುದಾನ ಬಂದಿರುತ್ತದೆ. ಮಳೆ ಕಡಿಮೆ ಆದ ತಕ್ಷಣ ಈ ಅನುದಾನದಲ್ಲಿ ರಸ್ತೆಗಳ ಕಾಂಕ್ರೆಟೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.