ಅರಣ್ಯ ರಕ್ಷಣೆಯೊಂದಿಗೆ ಹೆಚ್ಚೆಚ್ಚು ಗಿಡ ನೆಡಿ

KannadaprabhaNewsNetwork |  
Published : Oct 26, 2024, 01:10 AM IST
ಶುಕ್ರವಾರ ಕೆಲಗೇರಿ ಜೆಎಸ್ಸೆಸ್‌ ವಿದ್ಯಾಪೀಠದ ಆವರಣದಲ್ಲಿ 500ಕ್ಕೂ ಹೆಚ್ಚು ಗಿಡ ನೆಡುವ ಕಾರ್ಯಕ್ರಮಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಹಲವು ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಯುವಕರಲ್ಲಿ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯದಿಂದಾಗುವ ಅಪಾಯಗಳ ಬಗ್ಗೆ ಹೆಚ್ಚೆಚ್ಚು ತಿಳಿಸಿದರೆ ಮುಂದಾಗುವ ಅವಘಢ ತಡೆಯಲು ಅನುಕೂಲವಾಗಲಿದೆ. ಮರ ಕಡಿಯುವ ಅನಿವಾರ್ಯತೆ ಬಂದರೆ ಆ ಮರಕ್ಕೆ ಬದಲಾಗಿ ಇನ್ನೊಂದು ಗಿಡ ನೆಡುವುದು ಕಡ್ಡಾಯವಾಗಬೇಕು.

ಧಾರವಾಡ:

ಅರಣ್ಯ ನಾಶ ಈಗಾಗಲೇ ಪರಿಸರದ ಜತೆಗೆ ಹವಾಮಾನದ ಮೇಲೂ ಗಂಭೀರ ಪರಿಣಾಮ ಬೀರಿದೆ. ಇನ್ನೂ ಹೆಚ್ಚಿನ ಅವಘಢ ತಡೆಯಲು ಅರಣ್ಯ ಸಂರಕ್ಷಣೆಯ ಜತೆಗೆ ಹೆಚ್ಚು ಗಿಡ ಬೆಳೆಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಹೇಳಿದರು.

ಇಲ್ಲಿಯ ಕೆಲಗೇರಿ ಜೆಎಸ್ಸೆಸ್‌ ವಿದ್ಯಾಪೀಠದ ಆವರಣದಲ್ಲಿ ಶುಕ್ರವಾರ 500 ಉಪಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪ್ರತಿಯೋರ್ವ ವ್ಯಕ್ತಿಯೂ ಪ್ರತಿ ವರ್ಷ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಲು ಪಣ ತೊಡಬೇಕು. ಈ ಹವ್ಯಾಸವನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಸುವಲ್ಲಿ ಪಾಲಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದರು.

ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ನಿರ್ದೇಶನದಂತೆ ದೇಶಾದ್ಯಂತ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಭರದಿಂದ ಸಾಗಿದ್ದು ಸ್ವಚ್ಛತೆಯೆ ಜತೆಗೆ ಗಿಡ ನೆಟ್ಟು ಬೆಳೆಸುವ ಯೋಜನೆಯೂ ಇದರಲ್ಲಿ ಒಂದಾಗಿದೆ ಎಂದು ಹೇಳಿದರು.

ಜೆಎಸ್ಸೆಸ್‌ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ. ಬಿರಾದಾರ ಮಾತನಾಡಿ, ಸಸ್ಯ ಪ್ರೀತಿ ಮತ್ತದರ ಒಡನಾಟವನ್ನು ಮಕ್ಕಳಿಗೆ ಪಠ್ಯದ ಒಂದು ಭಾಗವಾಗಿ ಕಲಿಸಬೇಕು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಬೃಹತ್‌ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಕೈ ಹಾಕುವ ಮೂಲಕ ಪರಿಸರ ರಕ್ಷಣೆಗೆ ಮೇಲ್ಪಂಕ್ತಿ ಹಾಕಿದೆ ಎಂದರು.

ತೋಟಗಾರಿಕೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಕೆ. ಹೆರ್ಕಲ್ ಮಾತನಾಡಿ, ಯುವಕರಲ್ಲಿ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯದಿಂದಾಗುವ ಅಪಾಯಗಳ ಬಗ್ಗೆ ಹೆಚ್ಚೆಚ್ಚು ತಿಳಿಸಿದರೆ ಮುಂದಾಗುವ ಅವಘಢ ತಡೆಯಲು ಅನುಕೂಲವಾಗಲಿದೆ. ಮರ ಕಡಿಯುವ ಅನಿವಾರ್ಯತೆ ಬಂದರೆ ಆ ಮರಕ್ಕೆ ಬದಲಾಗಿ ಇನ್ನೊಂದು ಗಿಡ ನೆಡುವುದು ಕಡ್ಡಾಯವಾಗಬೇಕು ಎಂದು ಹೇಳಿದರು.

ಪರಿಸರವಾದಿ ಶಂಕರ ಕುಂಬಿ, ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜಿನಲ್ಲಿ ನೆಡುತೋಪು ವ್ಯವಸ್ಥೆಯನ್ನು ಜಿಲಾ ಆಡಳಿತಗಳು ಕಡ್ಡಾಯಗೊಳಿಸಬೇಕು ಎಂದರು.

ಈ ವೇಳೆ ಬ್ಯಾಂಕಿನ ಮಹಾಪ್ರಬಂಧಕರಾದ ಆರ್.ಟಿ. ಕಾಂಬಳೆ, ಪುನೀತ್ ಎಂ, ಸತೀಶ್ ಆರ್, ದಿಲೀಪ್ ಕುಮಾರ ಇದ್ದರು. ಬ್ಯಾಂಕಿನ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಸ್ವಾಗತಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ