ಎಐಡಿವೈಒ 59ನೇ ಸಂಸ್ಥಾಪನ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ

KannadaprabhaNewsNetwork | Published : Jun 28, 2024 12:53 AM
Follow Us

ಸಾರಾಂಶ

ಹವಮಾನದ ವೈಪರೀತ್ಯದಿಂದ ಮಾನವ ಹಾಗೂ ಜೀವ ಸಂಕುಲದ ಮೇಲೆ ಭೀಕರ ದುಷ್ಪರಿಣಾಮಗಳು ಹೆಚ್ಚಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಎ ಐ ಡಿ ವೈಒ ಕ ಸಂಘಟನೆಯು 59ನೇ ಸಂಸ್ಥಾಪನಾ ದಿನದ ಪ್ರಯುಕ್ತ ಮೈಸೂರಿನ ಸಿಪಿಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಎಂ .ಪ್ರಕಾಶ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ "ಪರಿಸರ ಸಂರಕ್ಷಣೆಯ ನಮ್ಮೆಲ್ಲರ ಹೊಣೆ " ಎಂಬ ಶೀರ್ಷಿಕೆ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಎ ಐ ಡಿ ವೈಒ ಸಂಘಟನೆ ಜಿಲ್ಲಾ ಅಧ್ಯಕ್ಷ ಸುನಿಲ್ ಟಿ . ಆರ್. ಮಾತನಾಡಿ, ವಾತಾವರಣವೂ ಇಂದು ಕಲುಷಿತವಾಗುತ್ತಿದೆ. ಹವಮಾನದ ವೈಪರೀತ್ಯದಿಂದ ಮಾನವ ಹಾಗೂ ಜೀವ ಸಂಕುಲದ ಮೇಲೆ ಭೀಕರ ದುಷ್ಪರಿಣಾಮಗಳು ಹೆಚ್ಚಾಗಿದೆ. ಹೆಚ್ಚು ಹೆಚ್ಚು ಮಾಲಿನ್ಯಕ್ಕೆ ಒಳಗಾಗುತ್ತಿರುವ ಈ ಜಗತ್ತನ್ನು ನೋಡುತ್ತಿದ್ದರೆ ಖಂಡಿತ ಬೇಸರವಾಗುತ್ತದೆ ಎಂದರು.

'''' ನಮ್ಮ ನೈಸರ್ಗಿಕ ಪರಿಸರದೊಂದಿಗೆ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಮಲಿನತೆ ಹೆಚ್ಚುತ್ತಿದ್ದು ಇಂತಹ ಎಲ್ಲಾ ಸಮಸ್ಯೆಗಳ ವಿರುದ್ಧ ಯುವ ಜನರು ಧ್ವನಿ ಎತ್ತಬೇಕಾಗಿದೆ. ಜಾಗತಿಕ ತಾಪಮಾನ ಹೆಚ್ಚಳ ,ಚಂಡಮಾರುತ, ಪರಿಸರ ಮಾಲಿನ್ಯ ಪ್ರವಾಹ ,ಬರ ಇಂತಹ ನೈಸರ್ಗಿಕ ವಿಕೋಪಗಳಿಗೆ ಬಂಡವಾಳಶಾಹಿಗಳ ಲಾಭಕೋರತನವೇ ಮೂಲ ಕಾರಣ. ಅಕ್ರಮ ಗಣಿಗಾರಿಕೆ ,ಪ್ರವಾಸೋದ್ಯಮ, ಅಭಿವೃದ್ಧಿ ಚಟುವಟಿಕೆಗಳ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಾ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನೇ ಕಡೆಗಣಿಸಿದ್ದಾರೆ. ಯಾವುದೇ ನೈಸರ್ಗಿಕ ವಿಕೋಪಗಳು ನಡೆದ ಸಂದರ್ಭದಲ್ಲಿ ಇಂದು ಬಡ ಜನರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಪ್ರಜ್ಞಾವಂತ ಯುವಜನರಾದ ನಾವೆಲ್ಲರೂ ಪರಿಸರ ರಕ್ಷಣೆಗೆ ಹೊತ್ತು ನೀಡುವುದರೊಂದಿಗೆ ಕಾರ್ಪೊರೇಟ್ ಮನೆತನಗಳ ಪರ ನಿಂತು ಪರಿಸರ ನಾಶ ಮಾಡುತ್ತಿರುವ ಶಕ್ತಿಗಳ ವಿರುದ್ಧ ಯುವ ಜನರು ಸಂಘಟಿತರಾಗಿ ಹೋರಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಮದ್ಯ ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮದ ಅತಿಥಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಜಿ. ದಿನೇಶ್, ಟಿ. ನರಸೀಪುರ ಸರ್ಕಾರಿ ಐಟಿಐ ವಿಶೇಷಾಧಿಕಾರಿ ಡಾ.ದೊಡ್ಡಯ್ಯ, ಎನ್ಎಸ್ಎಸ್ ಎಸ್.ಎಂ. ಮಧುಸೂದನ್, ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ನೀತುಶ್ರೀ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.