ಇಡ್ಲಿಯಲ್ಲಿ ಡೆಡ್ಲಿ ಕ್ಯಾನ್ಸರ್‌: ಪ್ಲಾಸ್ಟಿಕ್‌ ಬಳಕೆಗೆ ನಿಷೇಧ

KannadaprabhaNewsNetwork | Published : Feb 28, 2025 12:49 AM

ಸಾರಾಂಶ

ರಾಜ್ಯದ ಹಲವೆಡೆ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಹೆಚ್ಚುತ್ತಿದ್ದು, ಇದರಿಂದ ಆರೋಗ್ಯಕ್ಕೆ ಮಾರಕವಾಗುವ ಕ್ಯಾನ್ಸರ್‌ಕಾರಕ ಅಂಶ ಇಡ್ಲಿ ಜತೆ ಸೇರುತ್ತಿದೆ.

- ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಅಪಾಯಕಾರಿ

- ಶೀಘ್ರದಲ್ಲೇ ಅಧಿಕೃತ ಆದೇಶ: ಸಚಿವ ದಿನೇಶ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಹಲವೆಡೆ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಹೆಚ್ಚುತ್ತಿದ್ದು, ಇದರಿಂದ ಆರೋಗ್ಯಕ್ಕೆ ಮಾರಕವಾಗುವ ಕ್ಯಾನ್ಸರ್‌ಕಾರಕ ಅಂಶ ಇಡ್ಲಿ ಜತೆ ಸೇರುತ್ತಿದೆ. ಹೀಗಾಗಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ನಿಷೇಧಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.

ರಾಜ್ಯದ 251 ಆಹಾರ ಕೇಂದ್ರಗಳಲ್ಲಿ ಆಹಾರಗಳ ಗುಣಮಟ್ಟ ಪರೀಕ್ಷೆ ನಡೆಸಿದ್ದು, ಈ ಪೈಕಿ 51 ಆಹಾರದ ಮಾದರಿಗಳು ಅಸುರಕ್ಷಿತ ಎಂದು ದೃಢಪಟ್ಟಿದೆ. ಈ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಶೀಟ್‌ ಬಳಸಿ ಇಡ್ಲಿ ಬೇಯಿಸುತ್ತಿರುವುದು ಕಂಡು ಬಂದಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಶೀಟ್‌ ಬಳಕೆ ಮಾಡುವಂತಿಲ್ಲ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಗೋಬಿ ಮಂಚೂರಿ, ಕಬಾಬ್‌, ಕಾಟನ್‌ ಕ್ಯಾಂಡಿಗಳ ತಯಾರಿಕೆಯಲ್ಲಿ ಬಳಸುವ ಫುಡ್‌ ಕಲರ್‌ ಕ್ಯಾನ್ಸರ್‌ಕಾರಕ ಎಂಬ ಕಾರಣಕ್ಕೆ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಇತ್ತೀಚೆಗೆ 251 ಹೋಟೆಲ್‌ಗಳಲ್ಲಿನ ಆಹಾರ ಪರೀಕ್ಷೆ ನಡೆಸಿದ್ದು, ಇದರಲ್ಲಿ 51 ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ವರದಿ ಬಂದಿದೆ. ಇದೇ ವೇಳೆ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿನ ರಾಸಾಯನಿಕ ಅಂಶ ಇಡ್ಲಿಗೆ ಸೇರಿ ಅದನ್ನು ತಿನ್ನುವವರ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಇಡ್ಲಿ ಬೇಯಿಸಲು ಇನ್ನು ಮುಂದೆ ಪ್ಲಾಸ್ಟಿಕ್‌ ಬಳಸುವಂತಿಲ್ಲ. ಸಂಪೂರ್ಣವಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ತಕ್ಷಣ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌, ನಗರದಲ್ಲಿ ಹೆಚ್ಚಿನ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ ಬಳಸುತ್ತಿಲ್ಲ. ಬಳಸುತ್ತಿದ್ದರೆ ಅದು ಖಂಡಿತಾ ತಪ್ಪು. ಬಹುತೇಕ ಹೋಟೆಲ್‌ಗಳು ನಾನ್‌ಸ್ಟಿಕ್‌ ಪ್ಲೇಟ್‌ ಬಳಸುತ್ತಿವೆ ಅಥವಾ ಪ್ಲೇಟ್‌ಗಳಲ್ಲಿ ಬಟ್ಟೆಗಳನ್ನು ಬಳಸಿ ಇಡ್ಲಿ ಮಾಡಲಾಗುತ್ತಿದೆ. ಎಲ್ಲರೂ ಇಡ್ಲಿ ಬೇಯಿಸಲು ಇದೇ ವಿಧಾನ ಅನುಸರಿಸಬೇಕು ಎಂದರು.

Share this article