ಆತ್ಮಭೂಷಣ್
ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ ತ್ಯಾಜ್ಯಗಳನ್ನು ಬಿಸಾಡುವುದು ತಪ್ಪುತ್ತಿಲ್ಲ. ಪ್ಲಾಸ್ಟಿಕ್ ನಿಷೇಧ, ಕಸ ಮುಕ್ತ ಜಿಲ್ಲೆಯಾಗಿ ಘೋಷಣೆ ಹೊರಡಿಸಿದರೂ ಅದು ಕಾರ್ಯಗತಗೊಳ್ಳುವುದು ವಿರಳ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಹೊರತಾಗಿಲ್ಲ. ಅಂಥದ್ದರಲ್ಲಿ ಪ್ಲಾಸ್ಟಿಕ್, ಕಸ ತ್ಯಾಜ್ಯ ಮುಕ್ತವಾಗಿ ದ.ಕ. ಜಿಲ್ಲೆಯನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರೇತರ ಸಂಘಸಂಸ್ಥೆ ಜನಶಿಕ್ಷಣ ಟ್ರಸ್ಟ್ ಗಟ್ಟಿ ಹೆಜ್ಜೆ ಇರಿಸಿದೆ. ಜನಶಿಕ್ಷಣ ಟ್ರಸ್ಟ್‌ನ ಪ್ರಯತ್ನದ ಫಲವಾಗಿ ಕಸ ಮುಕ್ತ ಜಿಲ್ಲೆಗಾಗಿ ಸ್ವಚ್ಛತೆಯ ಘೋಷಣಾ ಪತ್ರ ಸಲ್ಲಿಸುವಂತೆ ಎಲ್ಲ ಇಲಾಖೆಗಳಿಗೆ ಸರ್ಕಾರವೇ ಪತ್ರ ಬರೆದು ಸೂಚನೆ ನೀಡಿದೆ. ಮಾತ್ರವಲ್ಲ ಸ್ವಚ್ಛತೆ ನಿಯಮ ಉಲ್ಲಂಘಿಸಿದವರಿಗೆ ದಂಡ ಪ್ರಯೋಗ ಆರಂಭವಾಗಿದೆ!
ದ.ಕ. ಜಿಲ್ಲೆಯಲ್ಲಿ ನಗರ ಮಾತ್ರವಲ್ಲ ಗ್ರಾಮೀಣ ಭಾಗಗಳಲ್ಲೂ ಕಸ, ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಹಾಕುವುದಲ್ಲದೆ, ಕಸದ ಕೊಂಪೆಯಂತೆ ಮಾಡಲಾಗುತ್ತಿದೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜನಶಿಕ್ಷಣ ಟ್ರಸ್ಟ್ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಪತ್ರಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದಲೂ ಸ್ಪಂದನ ದೊರಕಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಇಲಾಖೆಗಳಿಗೆ ಪತ್ರ ಬರೆದು ತಕ್ಷಣವೇ ಸ್ವಚ್ಛತೆಯ ಘೋಷಣಾ ಪತ್ರ ಸಲ್ಲಿಕೆ ಮಾಡುವಂತೆ ಹಾಗೂ ತಪ್ಪಿದರೆ ದಂಡ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಘೋಷಣಾ ಪತ್ರ, ದಂಡಾಸ್ತ್ರ ಪ್ರಯೋಗ:
ಕಸ ವಿಂಗಡಣೆ ಪ್ರಕ್ರಿಯೆಗೆ ಎಂಆರ್‌ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘಟಕಗಳು ಪಂಚಾಯ್ತಿ ವ್ಯಾಪ್ತಿಗಳಲ್ಲಿ ಇದೆ. ಆದರೆ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ಗ್ರಾ.ಪಂ. ಮಟ್ಟದ ಕಸ ವಿಲೇವಾರಿ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈಗಾಗಲೇ ದ.ಕ.ದಲ್ಲಿ ಉಳ್ಳಾಲ ತಾಲೂಕನ್ನು ಪ್ರಾಯೋಗಿಕವಾಗಿ ಕಸಮುಕ್ತ ಸ್ವಚ್ಛತೆಗೆ ಒಳಪಡಿಸಲು ಜನಶಿಕ್ಷಣ ಟ್ರಸ್ಟ್ ನಿರ್ಧರಿಸಿದೆ. ಮನೆಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಉಸ್ತುವಾರಿ ಸಚಿವರ ಸೂಚನೆಗೆ ವಿವಿಧ ಇಲಾಖೆಗಳಿಂದ ಅನುಷ್ಠಾನದ ಭರವಸೆ ದೊರೆತಿದೆ.
ಕಸ ವಿಲೇವಾರಿಗೆ ಸಂಬಂಧಿಸಿ ಎಲ್ಲ ಇಲಾಖೆ ಮತ್ತು ಸಂಘಸಂಸ್ಥೆಗಳು ಒಗ್ಗೂಡಿ ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನವನ್ನೇ ಹಮ್ಮಿಕೊಳ್ಳುವಂತೆ ಉಸ್ತುವಾರಿ ಸಚಿವರ ಕಚೇರಿ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ.
-ಅಂಗನವಾಡಿ, ಶಾಲೆ, ಕಾಲೇಜು, ವಸತಿ ನಿಲಯಗಳು, ಮತ್ತು ಆಸ್ಪತ್ರೆಗಳಲ್ಲಿ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡುವುದಲ್ಲದೆ, ವ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು.
-ಜಿಲ್ಲೆಯ ಪ್ರತಿ ಮನೆ, ವ್ಯಾಪಾರ ಮಳಿಗೆಗಳಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇರುವುದನ್ನು ಖಚಿತಪಡಿಸಬೇಕು. ನಿಯಮಿತವಾಗಿ ತ್ಯಾಜ್ಯ ಸಂಗ್ರಹಿಸಲು ಸಂಬಂಧಿತ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಇವುಗಳ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
-ಶೀನ ಶೆಟ್ಟಿ, ಕೃಷ್ಣ ಮೂಲ್ಯ, ನಿರ್ದೇಶಕರು, ಜನ ಶಿಕ್ಷಣ ಟ್ರಸ್ಟ್, ಮುಡಿಪು