ವಿದ್ಯಾರ್ಥಿಗಳು ಜೀವವೈವಿಧ್ಯತೆ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ರೆನಿಟ ಮೆಥೈಯಿಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಮೂಲಕ ಪಶ್ಚಿಮಘಟ್ಟದ ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರ್ನಾಟಕ ಪರಿಸರ ನಿರ್ವಹಣೆ ಹಾಗೂ ನೀತಿಶಾಸ್ತ್ರ ಸಂಶೋಧನಾ ಸಂಸ್ಥೆಯ ಮಾಹಿತಿ ಅಧಿಕಾರಿ ರೆನಿಟ ಮೆಥೈಯಿಸ್ ಅವರು ಕರೆ ನೀಡಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಪ್ರಾಣಿಶಾಸ್ತ್ರ ವಿಭಾಗ ಮತ್ತು ಕರ್ನಾಟಕ ಪರಿಸರ ನಿರ್ವಹಣೆ ಹಾಗೂ ನೀತಿ ಶಾಸ್ತ್ರ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ‘ಹವಮಾನ ಬದಲಾವಣೆ ಮತ್ತು ಪಶ್ಚಿಮ ಘಟ್ಟದ ಜೀವವೈವಿಧ್ಯತೆ’ ಕುರಿತು ಕಾರ್ಯಾಗಾರ ನಡೆಯಿತು.ಕಾಲೇಜ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಮತ್ತು ಜಾಗೃತಿ ಮೂಡಿಸಬೇಕು. ಪರಿಸರದ ಕುರಿತು ಹೆಚ್ಚು ಅರಿವು ಮೂಡಿಸಿ ಪರಿಸರ ರಾಯಭಾರಿಗಳನ್ನಾಗಿ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್ ನ ಪ್ರಾಂಶುಪಾಲ ಡಾ.ಮೇಜರ್ ಬಿ.ರಾಘವ ಅವರು, ಮಾನವನು ಆಧುನಿಕತೆಯ ಹೆಸರಿನಲ್ಲಿ ಹಲವು ಕಾರಣಗಳನ್ನು ನೀಡಿ ನಿಸರ್ಗವನ್ನು ಅತಿಕ್ರಮಣ ಮಾಡುತ್ತಿದ್ದಾನೆ. ವಿವಿಧ ಯೋಜನೆಗಳು, ರೆಸಾರ್ಟ್, ಸಂಸ್ಕೃತಿ, ವಾಣಿಜ್ಯ ಬೆಳೆಗಳ ಸಂರಕ್ಷಣೆಗಾಗಿ ಬಳಸುವ ವಿಷಕಾರಿ ಕೀಟನಾಶಕಗಳು, ಪ್ಲಾಸ್ಟಿಕ್ ಬಳಕೆ, ವಸತಿ ಪ್ರದೇಶಗಳ ವಿಸ್ತರಣೆಗಳೆಲ್ಲವೂ ಪರಿಸರ ಮತ್ತು ಜೀವ ವೈವಿಧ್ಯತೆಯ ನಾಶಕ್ಕೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಯುವ ಜನತೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡಬೇಕೆಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಮೈಸೂರು ಹಸಿರು ಹೆಜ್ಜೆ ಸಂಸ್ಥೆಯ ಮನು ಕೃಷ್ಣಮೂರ್ತಿ ಅವರು, ಪಶ್ಚಿಮಘಟ್ಟದ ಕಾಡುಗಳು, ಅಲ್ಲಿನ ಜೀವ ವೈವಿಧ್ಯತೆ, ಮಳೆ ಮತ್ತು ನೀರಿನ ಚಕ್ರದ ಬದಲಾವಣೆ, ಕಾಡುಗಳ ನಾಶ, ಸಸ್ಯ ಹಾಗೂ ಪ್ರಾಣಿಗಳ ಸಂತಾನೋತ್ಪತ್ತಿ ಬದಲಾವಣೆ, ಭೌಗೋಳಿಕ ಅಸಮತೋಲನ, ಪರಿಸರ ಮತ್ತು ಸ್ಥಳೀಯ ಪ್ರಭೇದಗಳ ಸಂರಕ್ಷಣೆ ಕುರಿತು ಜಾಗೃತಿಯ ಸಂದೇಶ ನೀಡಿದರು.ಕಾರ್ಯಕ್ರಮದ ಸಂಯೋಜಕ ಡಾ.ಎಂ.ವಿ.ಕೃಷ್ಣ, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆ.ಟಿ.ವರ್ಷ ನಿರೂಪಿಸಿ, ಡಾ.ಸೌಮ್ಯ ಕೆ.ಸ್ವಾಗತಿಸಿ, ಬಿ.ಎಂ.ನಳಿನಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.