ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳಗಾವಿಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗೆ ಆಯ್ಕೆಯಾಗುವ ಮೂಲಕ ಬೆಳಗಾವಿ ಅಷ್ಟೇ ಅಲ್ಲದೇ ರಾಜ್ಯ ಹಾಗೂ ದೇಶದ ಕೀರ್ತಿ ಹೆಚ್ಚಿಸಿರುವ ಆಟಗಾರರು, ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್ಗೆ ತೆರಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನೇರವಿನ ಹಸ್ತದ ನಿರೀಕ್ಷೆಯಲ್ಲಿದ್ದಾರೆ.ಶ್ರೀಲಂಕಾದ ಕೊಲಂಬೊದಲ್ಲಿ ಇದೇ ಜುಲೈ 8 ರಿಂದ ಜುಲೈ 10ರ ವರೆಗೆ ಎರಡು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ. ಶ್ರೀಲಂಕಾ ಸಹಯೋಗದಲ್ಲಿ ಆಯೋಜಿಸಿರುವ ಈ ಚಾಂಪಿಯನ್ ಶಿಪ್ನಲ್ಲಿ ಭಾರತ, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ ಸೇರಿ ಇನ್ನಿತರ ದೇಶಗಳ ತಂಡಗಳು ಭಾಗವಹಿಸಲಿವೆ. ಪುರುಷರ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಮಹಾಂತೇಶ ಹೊಂಗಲ, ಸೂರಜ್ ಧಾಮನೇಕರ್, ಸುರೇಶ ಕುಂಬಾರ, ಈರಣ್ಣ ಹೊಂಡಪ್ಪನವರ, ಮನಸೂರ್ ಮುಲ್ಲಾ ಆಯ್ಕೆಯಾದರೆ, ಮಹಿಳೆಯರ ತಂಡದಲ್ಲಿ ಮನಿಷಾ ಪಾಟೀಲ, ಭಾಗ್ಯಶ್ರೀ ಮಳಲಿ ಸ್ಥಾನ ಪಡೆದಿದ್ದಾರೆ. ಆದರೆ, ಶ್ರೀಲಂಕಾಗೆ ತೆರಳಲು ಇವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ದಾನಿಗಳ ನೆರವಿನ ಹಸ್ತ ನಮಗೆ ಬೇಕಿದೆ ಎಂದು ಕೇಳಿಕೊಂಡಿದ್ದಾರೆ.2023ರಲ್ಲಿ ಛತ್ತಿಸಗಡದಲ್ಲಿ ನಡೆದ 7ನೇ ರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ತಂಡದಲ್ಲಿ ಇವರೆಲ್ಲಾ ಆಡಿದ್ದರು. ಪುಣೆಯಲ್ಲಿ 2023ರ ಸೆಪ್ಟೆಂಬರ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರಗ್ಬಿ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ, 2024 ಜನವರಿಯಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪರ್ಪಪ್ ಫೆಸ್ಟ್ನಲ್ಲಿ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಈಗ ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲೂ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದ್ದಾರೆ. ಎಲ್ಲ ಆಟಗಾರರು ನಾವು ಬಡತನದ ಪರಿಸ್ಥಿತಿಯಲ್ಲಿದ್ದು, ಸಾಮಾನ್ಯ ಆಟಗಾರರಿಗೆ ಸರ್ಕಾರ ಸಾಕಷ್ಟು ಸಹಕಾರ ನೀಡುತ್ತದೆ. ಅಲ್ಲದೇ ಕ್ರಿಕೆಟ್ ಆಟಗಾರರಿಗೆ ಕೋಟ್ಯಂತರ ರುಪಾಯಿ ವ್ಯಯಿಸುತ್ತಾರೆ. ವಿಕಲಚೇತನರು ಸಾಧನೆ ಮಾಡುವ ಹಂಬಲ, ದೇಶಕ್ಕೆ ಕೀರ್ತಿ ತರುವ ಛಲವನ್ನು ಹೊಂದಿದ್ದಾರೆ. ಶ್ರೀಲಂಕಾಗೆ ಹೋಗಲು ಸುಮಾರು ₹6 ಲಕ್ಷ ಹಣದ ಅವಶ್ಯಕತೆ ಇದೆ.ಹಾಗಾಗಿ, ರಾಜಕಾರಣಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿ ಕೀರ್ತಿ ಹೆಚ್ಚಿಸುವ ಭರವಸೆ ಇದೆ. ಸೂರಜ್ - ಮೊ.8861470235 ದಾನಿಗಳು ಸಂಪರ್ಕಿಸಬಹುದಾಗಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್ಗೆ ಬೆಳಗಾವಿ ಜಿಲ್ಲೆಯ ಏಳು ಆಟಗಾರರು ಆಯ್ಕೆಯಾಗಿದ್ದಾರೆ. ಪದಕ ಗೆಲ್ಲುವ ಉತ್ಸಾಹದಲ್ಲಿರುವ ಈ ಆಟಗಾರರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ದಾನಿಗಳ ನೆರವಿನ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
-ಮಹಾಂತೇಶ ಹೊಂಗಲ, ತಂಡದ ನಾಯಕ.ವಿಕಲಚೇತನರ ಬಗ್ಗೆ ಯಾವುದೇ ಕಾರಣಕ್ಕೂ ಅನುಕಂಪ ಬೇಡ. ಗೌರವ ಮತ್ತು ಅವಕಾಶ ಕೊಟ್ಟರೆ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತರುವ ಛಲ ನಮ್ಮಲ್ಲಿದೆ.-ಸೂರಜ್ ಧಾಮನೇಕರ್ .