ಹೀರೇಮಗಳೂರಿನಲ್ಲಿ ಪ್ಲೇಗಿನಮ್ಮ ಸಿಡಿ ಉತ್ಸವ

KannadaprabhaNewsNetwork | Published : Apr 20, 2025 1:59 AM

ಸಾರಾಂಶ

ಚಿಕ್ಕಮಗಳೂರು, ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮ ದೇವತೆಯರಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

ಅಂತರಘಟ್ಟಮ್ಮ ದೇವಾಲಯದ ಬಳಿ ಉತ್ಸವ ಮೂರ್ತಿ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮ ದೇವತೆಯರಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.ಉತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಕಲಾಭಿವೃದ್ಧಿ ಹೋಮ, ಶ್ರೀ ದುರ್ಗಾ ಹೋಮ, ಚಂಡಿಕಾ ಹೋಮ, ಲಕ್ಷ್ಮೀ ಹೋಮ, ಸರಸ್ವತಿ ಹೋಮ, ಕುಂಬಾಭಿಷೇಕ, ಮಹಾಪೂಜೆ ನಡೆದವು.ಭಾರ್ಗವಪುರಿ ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ಫಲ ಸಮರ್ಪಣೆ, ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಸಂಜೆ ವೇಳೆಗೆ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ಉತ್ಸವಮೂರ್ತಿಗಳನ್ನು ದೇವಾಲಯದಿಂದ ಹೊರತಂದು ನಾದಸ್ವರ, ಕೊಂಬು, ಕಹಳೆ, ಗ್ರಾಮೀಣ ವಾದ್ಯಗಳು, ದಕ್ಷಿಣ ಕನ್ನಡದ ತಟ್ಟಿ ಗೊಂಬೆಗಳು, ಕಳಶ ಹೊತ್ತ ಬಾಲೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸ ಲಾಯಿತು.

ಈ ವೇಳೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ಸಾರಿಸಿ, ರಂಗವಲ್ಲಿ ಹಾಕಿ, ಉತ್ಸವ ಮೂರ್ತಿಗಳನ್ನು ಸ್ವಾಗತಿಸಿ, ಆರತಿ ಎತ್ತಿ, ಪೂಜೆ ಸಲ್ಲಿಸಿದರು, ಗ್ರಾಮೀಣ ವಾದ್ಯಗಳ ಲಯಕ್ಕೆ ಮಕ್ಕಳು ಮತ್ತು ಯುವ ಜನತೆ ಕುಣಿದು ಕುಪ್ಪಳಿಸಿದರು.ಊರ ಮುಂಭಾಗದ ಅಂತರಘಟ್ಟಮ್ಮ ದೇವಾಲಯದ ಬಳಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಮತ್ತು ಪಂಚಭೂತಗಳಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ತಮ್ಮ ಮಕ್ಕಳನ್ನು ಸಿಡಿಗಂಬದಲ್ಲಿ ಕುಳ್ಳಿರಿಸಿ ಹರಕೆ ಸಲ್ಲಿಸಿದರು.ನಂತರ ಗ್ರಾಮೀಣ ವಾದ್ಯಗಳ ಭರಾಟೆ, ಭಕ್ತರ ಹರ್ಷೋದ್ಗಾರ, ಕರತಾಡನದ ನಡುವೆ ಉತ್ಸವ ಮೂರ್ತಿಗಳ ಸಿಡಿ ಮಹೋತ್ಸವ ನೆರವೇರಿತು. ದೇವಾಲಯದ ಅರ್ಚಕ ಶ್ರೀಧರ್ ನೇತೃತ್ವದ ತಂಡ ಉತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿತು, ದೇವಾಲಯ ಸಮಿತಿ ಅಧ್ಯಕ್ಷ ಸಿ. ಪಿ. ರವಿಶಂಕರ್, ಕಾರ್ಯದರ್ಶಿ ಡಿ.ಎಂ. ಶಂಕರ್ ಹಾಜರಿದ್ದರು, ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಮಳೆಯ ನಡುವೆಯೂ ಉತ್ಸವದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು, ಉತ್ಸವದ ಪ್ರಯುಕ್ತ ಗ್ರಾಮದ ಎಲ್ಲಾ ಬೀದಿಗಳು, ಮನೆ, ಮನೆಗಳು, ತಳಿರು ತೋರಣದಿಂದ ಅಲಂಕೃತಗೊಂಡು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

19 ಕೆಸಿಕೆಎಂ 1ಹಿರೇಮಗಳೂರಿನಲ್ಲಿ ಗ್ರಾಮ ದೇವತೆಯರಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

Share this article