ಜನರ ಭಾವನೆ ಜತೆ ರಾಜಕಾರಣ ಸರಿಯಲ್ಲ: ಶಾಸಕ ಶಿವರಾಮ ಹೆಬ್ಬಾರ್

KannadaprabhaNewsNetwork |  
Published : Sep 28, 2026, 01:45 AM IST
ಹುಳಗೋಡದಲ್ಲಿ ₹8.78 ಕೋಟಿ ವೆಚ್ಚದ ನೀರಾವರಿ ಯೋಜನೆ ಕಾಮಗಾರಿಯನ್ನು ಶಾಸಕ ಶಿವರಾಮ ಹೆಬ್ಬಾರ್ ಪರಿಶೀಲಿಸಿದರು. | Kannada Prabha

ಸಾರಾಂಶ

ಈ ಯೋಜನೆ ₹8.78 ಕೋಟಿ ವೆಚ್ಚದಲ್ಲಿ 4 ಕೆರೆಗಳಿಗೆ ನೀರು ತುಂಬಿಸುವ ಮೂಲಕ 251 ಹೆಕ್ಟೇರ್ ಪ್ರದೇಶದ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನೂಕೂಲವಾಗಲಿದೆ.

ಯಲ್ಲಾಪುರ: ಕೆಲವರು ಜನರ ಭಾವನೆಯ ಜತೆ ರಾಜಕಾರಣ ಮಾಡುತ್ತಾರೆ. ಆದರೆ ನಾನು ಜನರ ಬದುಕಿಗಾಗಿ ಅಭಿವೃದ್ಧಿ ಕಾರ್ಯದ ಜತೆ ಕೆಲಸ ಮಾಡುತ್ತೇನೆ. ಆ ನಿಟ್ಟಿನಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ₹1150 ಕೋಟಿ ವೆಚ್ಚದಲ್ಲಿ 500ಕ್ಕೂ ಹೆಚ್ಚಿನ ಕೆರೆಗಳಿಗೆ ಬೇಡ್ತಿ, ಕವಲಗಿ, ವರದಾ ನದಿಗಳ ನೀರು ತರುವ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ಭಾನುವಾರ ತಾಲೂಕಿನ ಮದ್ನೂರ್ ಪಂಚಾಯಿತಿ ವ್ಯಾಪ್ತಿಯ ಹುಳಗೋಡದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ₹8.78 ಕೋಟಿ ವೆಚ್ಚದ ನೀರಾವರಿ ಯೋಜನೆ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಈ ನೀರು ಪಡೆಯುವ ಫಲಾನುಭವಿಗಳು ಒಂದು ಸಂಘ ರಚಿಸಿಕೊಂಡು ಕ್ರಮಬದ್ಧವಾಗಿ ನೀರು ಬಿಡುವ ಕಾರ್ಯವನ್ನು ನೀವೇ ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಗೊಂದಲ ಮಾಡಿಕೊಳ್ಳದೆ ಪರಸ್ಪರ ಹೊಂದಾಣಿಕೆಯಿಂದ ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ ಎಂದು ಸ್ಥಳೀಯರಿಗೆ ಸೂಚಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಈ ಯೋಜನೆ ₹8.78 ಕೋಟಿ ವೆಚ್ಚದಲ್ಲಿ 4 ಕೆರೆಗಳಿಗೆ ನೀರು ತುಂಬಿಸುವ ಮೂಲಕ 251 ಹೆಕ್ಟೇರ್ ಪ್ರದೇಶದ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನೂಕೂಲವಾಗಲಿದೆ. ಇಲ್ಲಿ ಮೂರು ಅತ್ಯಂತ ಬೃಹತ್ತಾದ 125 ಎಚ್‌ಪಿ ಪಂಪ್‌ಅನ್ನು ಅಳವಡಿಸಲಾಗಿದ್ದು, ಇದಕ್ಕಾಗಿಯೇ 500 ಕೆಬಿ ವಿದ್ಯುತ್‌ನ ವ್ಯವಸ್ಥೆ ಸ್ಥಾಪಿಸಲಾಗಿದೆ. 4 ಕೆರೆಗಳ ಹೊರತುಪಡಿಸಿ 10 ಕಡೆ ರೈತರು ನೀರು ಪಡೆಯಲು ವಾಲ್ವ್‌ ನಿರ್ಮಿಸಲಾಗಿದೆ ಎಂದರು.

ಕಿರವತ್ತಿ, ಕಣ್ಣೀಗೇರಿ, ಮೈನಳ್ಳಿ, ಗುಂಜಾವತಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ 2000 ಎಚ್‌ಪಿ ಪಂಪ್ಅನ್ನು ಅಳವಡಿಸಿ171 ಕೆರೆಗಳಿಗೆ ನೀರು ತರುವ ಯೋಜನೆಗೆ ₹290 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲದೆ ಮುಂಡಗೋಡಿನಲ್ಲಿ 270 ಕೆರೆಗಳಿಗೆ 4 ಪಂಪ್ ಹೌಸ್‌ಗಳಿಂದ ನೀರು ತರುವ ಯೋಜನೆ ಮಾಡಲಾಗಿದ್ದು, ವರದಾ ನದಿಯಿಂದ ಬನವಾಸಿ ಭಾಗಕ್ಕೆ ನೀರು ತರುವ ಯೋಜನೆಯನ್ನ ಜಾರಿ ಮಾಡಲಾಗಿದೆ. ಅಲ್ಲದೇ ಯಲ್ಲಾಪುರ ಪಟ್ಟಣಕ್ಕಾಗಿ ಬೊಮ್ಮನಹಳ್ಳಿಯಿಂದ ನೀರು ತರುವ ಯೋಜನೆಗೆ ₹100 ಕೋಟಿ ವೆಚ್ಚ ಮಾಡಿ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 70ರಷ್ಟು ಕಾಮಗಾರಿ ಪೂರ್ತಿಗೊಂಡಿದ್ದು, ಮುಂದಿನ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಅರಭೈಲ್, ಡಬ್ಗುಳಿ, ಗುಳ್ಳಾಪುರ, ಕೆರೆಹೊಸಳ್ಳಿ, ಸೋಮನಳ್ಳಿಗಳಲ್ಲೂ ನೀರಾವರಿ ಯೋಜನೆ ಜಾರಿಗೆ ತಂದು ರೈತರಿಗೆ ಸಹಾಯ ಮಾಡಿದ ಸಂತೃಪ್ತಿ ನನಗಿದೆ. ಇದರಿಂದ ಸಾವಿರಾರು ರೈತರಿಗೆ ಸಾವಿರಾರು ಎಕರೆ ಜಮೀನುಗಳಿಗೆ ನೀರು ದೊರೆಯುವ ವ್ಯವಸ್ಥೆ ಮಾಡಿದ ತೃಪ್ತಿ ಇದೆ ಎಂದರು.ಹುಳಗೋಡಿನ ಗೋಪಾಲಕೃಷ್ಣ ಭಟ್ ಮಾತನಾಡಿ, ಪ್ರಸ್ತುತ ಬರಗಾಲ ಎದುರಿಸುವ ಸ್ಥಿತಿ ಬಂದಿದೆ. ನಮ್ಮ ಪ್ರದೇಶಕ್ಕೆ ಭಗೀರಥನ ಹಾಗೆ ಶಾಸಕ ಶಿವರಾಮ ಹೆಬ್ಬಾರ ನೀರು ಹರಿಸಿದ್ದಾರೆ. ಅವರ ಕಾರ್ಯದ ಬಗ್ಗೆ ಸದಾ ಋಣಿಯಾಗಿರಬೇಕು. ನಮ್ಮ ಪ್ರದೇಶದಲ್ಲಿ ಹಸಿರುಕ್ರಾಂತಿ ಆಗುವಂತೆ ಮಾಡಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಸೇರಿದಂತೆ ಸ್ಥಳೀಯರು ಬಹುಸಂಖ್ಯೆಯಲ್ಲಿ ಸೇರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರಿರಂಗನ್ ವರದಿಯ ಸಮಗ್ರ ಚರ್ಚೆಯಾಗಲಿ: ಮಾರುತಿ ಗುರೂಜಿ
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ