ಧಾರವಾಡ: ‘ಸಶಕ್ತ ಮಹಿಳೆ–ಸುಸ್ಥಿರ ಕೃಷಿ’ ಎಂಬ ಘೋಷವಾಕ್ಯದಡಿ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮೂರನೇ ದಿನ ವಾರಾಂತ್ಯ ಭಾನುವಾರ ಜನಸಾಗರವೇ ಹರಿದುಬಂತು.
ಬೀಜಕ್ಕೆ ಬೇಡಿಕೆ: ಹಿಂಗಾರು ಬಿತ್ತನೆ ಹಿನ್ನೆಲೆಯಲ್ಲಿ ಬೀಜ ಮೇಳಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿಂಗಾರಿ ಜೋಳ, ಕಡಲೆ, ಗೋಧಿ, ಕುಸುಬೆ, ಉದ್ದು, ಅಲಸಂದಿ ಸೇರಿದಂತೆ ವಿವಿಧ ಸಿರಿಧಾನ್ಯಗಳ ಬೀಜಗಳು ಲಭ್ಯವಿದ್ದು, ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೀಜಗಳನ್ನು ಖರೀದಿಸಿದರು. ಟೊಮೆಟೊ, ಸೌತೆಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಸುಧಾರಿತ ಬೀಜಗಳ ಕಿಟ್‌ಗಳೂ ಮಾರಾಟವಾಗಿವೆ. ಹಿಂಗಾರು ಬಿತ್ತನೆಗಾಗಿ ಒಟ್ಟು 1,141.2 ಕ್ವಿಂಟಲ್ ಬೀಜ ಮಾರಾಟವಾಗಿದೆ. ಇದರೊಂದಿಗೆ 245 ಕೆ.ಜಿ. ತರಕಾರಿ ಬೀಜಗಳೂ ಮಾರಾಟವಾಗಿವೆ. ಒಟ್ಟಾರೆ ಬೀಜಗಳ ಮಾರಾಟದ ಮೌಲ್ಯ ರು.1.01 ಕೋಟಿ ಮೀರಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎನ್.ಬಿ. ಪ್ರಕಾಶ ತಿಳಿಸಿದ್ದಾರೆ.
ಜತೆಗೆ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿವಿಧ ಪ್ರಕಟಣೆಗಳಿಗೂ ಉತ್ತಮ ಬೇಡಿಕೆ ಕಂಡು ಬಂದಿದೆ. ಸುಮಾರು ರು. 2 ಲಕ್ಷ ಮೌಲ್ಯದ ಕೃಷಿ ಪುಸ್ತಕಗಳು ಮತ್ತು ಪ್ರಕಟಣೆಗಳು ಮಾರಾಟವಾಗಿವೆ.ಆಧುನಿಕ ಕೃಷಿ ಯಂತ್ರೋಪಕರಣಗಳು ಹಾಗೂ ಡ್ರೋನ್ ತಂತ್ರಜ್ಞಾನದ ಪ್ರದರ್ಶನಕ್ಕೂ ರೈತರು ಹೆಚ್ಚಿನ ಆಸಕ್ತಿ ತೋರಿದರು. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಬೆಳೆಗಳಿಗೆ ಔಷಧ ಸಿಂಪಡಣೆ, ಸಮಯ ಮತ್ತು ಕಾರ್ಮಿಕ ವೆಚ್ಚ ಕಡಿತ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ಪಡೆಯಲಾಯಿತು.