ನಾಟಕಗಳು ಹೊಸ ಆಲೋಚನೆ, ಚಿಂತನೆಗೆ ಪ್ರೇರಣೆ

KannadaprabhaNewsNetwork |  
Published : Sep 23, 2026, 02:15 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಧಾತ್ರಿ ರಂಗ ಸಂಸ್ಥೆ ವತಿಯಿಂದ ಜರುಗಿದ ನಿರ್ದಿಗಂತ ತಂಡದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಒಂದು ಉತ್ತಮ ನಾಟಕ ಪ್ರದರ್ಶನ ಮುಗಿದ ನಂತರವೂ ಅದರ ವಿಚಾರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡು ಹಲವು ಪ್ರಶ್ನೆ ಹುಟ್ಟುಹಾಕುತ್ತವೆ.

ಬಳ್ಳಾರಿ: ನಾಟಕಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಪ್ರೇಕ್ಷಕರಲ್ಲಿ ಸಾಮಾಜಿಕ ಎಚ್ಚರ ಮೂಡಿಸುವುದರ ಜತೆಗೆ ಹೊಸ ಆಲೋಚನೆ, ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಸಂಗಂ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಮಕ್ಕಳ ವೈದ್ಯ ಡಾ. ವೈ.ಸಿ.ಯೋಗಾನಂದ ರೆಡ್ಡಿ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಧಾತ್ರಿ ರಂಗ ಸಂಸ್ಥೆಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ನಟ ಪ್ರಕಾಶ್ ರೈ ಸಾರಥ್ಯದ ನಿರ್ದಿಗಂತ ತಂಡದ ಪ್ರಾಜೆಕ್ಟ್ ಪಂಚತಂತ್ರ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಆಗುಹೋಗು ಜನರ ಮುಂದಿಡುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ. ನಾಟಕಗಳು ಪ್ರೇಕ್ಷಕರನ್ನು ಕೆಲಕಾಲ ನಗಿಸುವ, ಭಾವನಾತ್ಮಕಗೊಳಿಸುವ ಕೆಲಸ ಮಾಡುವುದರ ಜತೆಗೆ, ನಮ್ಮ ಸುತ್ತಲಿನ ಸಾಮಾಜಿಕ ವಾಸ್ತವ ಅರಿತುಕೊಳ್ಳುವಂತೆ ಮಾಡುತ್ತವೆ. ಒಂದು ಉತ್ತಮ ನಾಟಕ ಪ್ರದರ್ಶನ ಮುಗಿದ ನಂತರವೂ ಅದರ ವಿಚಾರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡು ಹಲವು ಪ್ರಶ್ನೆ ಹುಟ್ಟುಹಾಕುತ್ತವೆ. ಆ ಮೂಲಕ ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದರು.

ಬಳ್ಳಾರಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರಂಗಚಟುವಟಿಕೆಗಳು ಚುರುಕುಗೊಳ್ಳುತ್ತಿರುವುದು ಸಂತಸದ ಸಂಗತಿ. ಹೊಸ ಆಲೋಚನೆ, ಹೊಸ ಪ್ರಯೋಗ ಹಾಗೂ ವಿಭಿನ್ನ ಕಥಾವಸ್ತು ಒಳಗೊಂಡ ನಾಟಕಗಳು ನಗರದಲ್ಲಿ ಹೆಚ್ಚೆಚ್ಚು ಪ್ರದರ್ಶನಗೊಳ್ಳಬೇಕು. ರಂಗಾಸಕ್ತರು ಇಂತಹ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರಂಗಭೂಮಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ರಂಗಭೂಮಿ ಪ್ರಸ್ತುತ ಹಲವು ಬಗೆಯ ಬಿಕ್ಕಟ್ಟು ಎದುರಿಸುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ರಂಗಭೂಮಿ ಜೀವಂತವಾಗಿಡುವುದು ಸವಾಲಿನ ಕೆಲಸವಾಗಿದೆ. ಕಲಾವಿದರು ಹಾಗೂ ಕಲಾ ಸಂಸ್ಥೆ ಪ್ರೋತ್ಸಾಹಿಸುವ ಮೂಲಕ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲೇಖಕ ಸಿದ್ದರಾಮ ಕಲ್ಮಠ, ಬಳ್ಳಾರಿಯಂತಹ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ರಂಗಚಟುವಟಿಕೆ ಮತ್ತೆ ಚುರುಕು ಪಡೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ರಂಗಭೂಮಿಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ವಿಚಾರ ಜನರಿಗೆ ತಲುಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದರು.

ವೇದಿಕೆಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದಿಹಾಳು, ಭಾವೈಕ್ಯತೆ ವೇದಿಕೆಯ ಪಿ.ಅಬ್ದುಲ್ಲಾ, ಕಲಾವಿದ ಎ.ಎಂ.ಪಿ. ವೀರೇಶಸ್ವಾಮಿ ಹಾಗೂ ನಿರ್ದೇಶಕ ಶಕೀಲ್ ಅಹ್ಮದ್ ಉಪಸ್ಥಿತರಿದ್ದರು.

ಧಾತ್ರಿ ಸಂಸ್ಥೆಯ ಕಾರ್ಯದರ್ಶಿ ಮಂಜು ಸಿರಿಗೇರಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಆಲಾಪ ಸಂಸ್ಥೆಯ ರಮಣಪ್ಪ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ, ಕಲಾವಿದ ತಿಪ್ಪೇಸ್ವಾಮಿ ಮುದ್ದಟನೂರು, ಸಂಗಂ ಟ್ರಸ್ಟ್ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳು, ಲೇಖಕ ದಸ್ತಗೀರಸಾಬ್ ದಿನ್ನಿ, ವೀರೇಂದ್ರ ರಾವಿಹಾಳು ಸೇರಿದಂತೆ ರಂಗಾಸಕ್ತರು, ಕಲಾವಿದರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ನಂತರ ನಿರ್ದಿಗಂತ ತಂಡದ ಪ್ರಾಜೆಕ್ಟ್ ಪಂಚತಂತ್ರ ನಾಟಕ ಪ್ರದರ್ಶನಗೊಂಡಿತು. ವಿಭಿನ್ನ ನಿರೂಪಣೆ, ಕಲಾವಿದರ ಅಭಿನಯ ಹಾಗೂ ಕಥಾವಸ್ತುವಿನ ಮೂಲಕ ಪ್ರೇಕ್ಷಕರ ಗಮನ ಸೆಳೆದ ನಾಟಕವು ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ವಿವಿಗೆ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ವಿಜೃಂಭಣೆಯಿಂದ ಕೃಷ್ಣಮೃಗ ಅಭಯಾರಣ್ಯ ಸುವರ್ಣ ಮಹೋತ್ಸವಕ್ಕೆ ನಿರ್ಧಾರ