ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮನವಿ
ಅನುದಾನ ಕೊರತೆಯಿಂದ ಇಲ್ಲಿಯ ನಾಮಧಾರಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಪೂರ್ಣಗೊಳಿಸಲು ಸಮಾಜ ಬಾಂಧವರು ದೇಣಿಗೆ ನೀಡಬೇಕು ಎಂದು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ೨೦೦೩ರಲ್ಲಿ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿದರು.೨೦೦೬ರಲ್ಲಿ ಮಾಜಿ ಸಿಂ ಎಸ್. ಬಂಗಾರಪ್ಪ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಹಿಂದಿನ ಸಂಸದ ಅನಂತಕುಮಾರ ಹೆಗಡೆ ₹೧೦ ಲಕ್ಷ ಅನುದಾನ ನೀಡಿದ್ದರು. ಅಲ್ಲದೆ ಮಾಜಿ ಸಚಿವ ಶಿವಾನಂದ ನಾಯ್ಕ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿವೇಕಾನಂದ ವೈದ್ಯ ಮತ್ತು ನಮ್ಮ ಸಮುದಾಯದ ರಾಜ್ಯಸಭಾ ಸದಸ್ಯರಾಗಿದ್ದ ಬಿ.ಕೆ. ಹರಿಪ್ರಸಾದ ಮುಂತಾದವರು ಸಾಕಷ್ಟು ಅನುದಾನ ನೀಡಿದ್ದರು. ಈ ವರೆಗೆ ₹೪.೩೮ ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡ ಪೂರ್ಣಗೊಳಿಸಲು ಇನ್ನೂ ₹೨ ಕೋಟಿಗೂ ಹೆಚ್ಚಿನ ಹಣ ಬೇಕು ಎಂದು ಅಂದಾಜು ಮಾಡಲಾಗಿದೆ. ಈ ಕುರಿತು ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿ ಚರ್ಚಿಸಿದಾಗ ₹೫೦ ಲಕ್ಷ ಮಂಜೂರು ಮಾಡಿದ್ದು, ಇನ್ನುಳಿದ ಒಂದು ಕೋಟಿ ರು. ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ಸುಮಾರು ಒಂದು ಕೋಟಿ ರು. ಕೊರತೆ ಬೀಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆನಂದ ನಾಯ್ಕ ಹೊಸೂರು, ವಿ.ಎನ್. ನಾಯ್ಕ, ಎಸ್.ಎಂ. ನಾಯ್ಕ, ಎ.ಜಿ. ನಾಯ್ಕ, ದಿವಾಕರ ನಾಯ್ಕ ಹೆಮ್ಮನಬೈಲ್, ಪ್ರವೀಣ ವಾಟಗಾರ, ರವಿಕುಮಾರ ನಾಯ್ಕ, ಸುಧೀರ್ ನಾಯ್ಕ, ಮಹಾಬಲೇಶ್ವರ ನಾಯ್ಕ, ಜನಾರ್ದನ ನಾಯ್ಕ ಮುಂತಾದವರಿದ್ದರು.