ಸಮೀಕ್ಷೆ ವೇಳೆ ಮಾದಿಗ ಎಂದೇ ನಮೂದಿಸಿ: ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ

KannadaprabhaNewsNetwork | Published : May 5, 2025 12:49 AM

ಸಾರಾಂಶ

ಒಳ ಮೀಸಲಾತಿ ಕಲ್ಪಿಸಲು ಸಮೀಕ್ಷೆ ನಡೆಸುತ್ತಿರುವ ಕಾರಣ ಯಾವುದೇ ಹಿಂಜರಿಕೆ ಇಲ್ಲದೆ ಮಾದಿಗ ನಮೂದಿಸಬೇಕು. ಇದು ಮುಂದಿನ ತಲೆಮಾರಿನವರಿಗೆ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ.ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಆಯೋಗ ಮೇ 5 ರಿಂದ ಸಮೀಕ್ಷೆ ನಡೆಸಲಿದ್ದು, ಯಾವುದೇ ಗೊಂದಲಕ್ಕೆ ಒಳಗಾಗದೆ ಮಾದಿಗ ಎಂದು ನಮೂದಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಪ.ಜಾತಿ ಸಮುದಾಯದ ಸಮೀಕ್ಷೆ ನಡೆಯಲಿದ್ದು, ಯಾವುದೇ ಗೊಂದಲ, ಅಪಸ್ವರ ಇಲ್ಲದೆ ಜಾತಿಯ ಕಾಲಂನಲ್ಲಿ ಮಾದಿಗ ಎಂದು ನಮೂದಿಸುವಂತೆ ಮಾದಿಗ ಸಮುದಾಯದ ಮುಖಂಡರ ಮಹತ್ವದ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು. ಪೌರ ಕಾರ್ಮಿಕರದ್ದು ಜಾತಿಯಲ್ಲ. ಅದೊಂದು ವೃತ್ತಿ. ಆದ್ದರಿಂದ ಕಮ್ಮಾರರು, ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರು ಮಾದಿಗರೇ ಆಗಿರುವ ಕಾರಣ ಸಮೀಕ್ಷೆಯ ವೇಳೆ ಮಾದಿಗ ಎಂದೇ ಬರೆಸಬೇಕು ಎಂದರು.

ಒಂದು ವೇಳೆ ಸಮೀಕ್ಷೆಯಲ್ಲಿ ವ್ಯತ್ಯಾಸವಾದರೆ ಒಳ ಮೀಸಲಾತಿಯ ಪ್ರಮಾಣ ಕಡಿಮೆ ಆಗುತ್ತದೆ. ಆದ್ದರಿಂದ ಸೋಮವಾರದಿಂದ ಮೂರು ಹಂತಗಳಲ್ಲಿ ನಡೆಯುವ ಸಮೀಕ್ಷೆ ವೇಳೆ ಜವಾಬ್ದಾರಿಯಿಂದ ನಮೂದಿಸಬೇಕು ಎಂದು ಸಮುದಾಯದ ಮುಖಂಡರಿಗೆ ಕರೆ ನೀಡಿದರು.

ಮೇ 5 ರಿಂದ ಮೂರು ಹಂತಗಳಲ್ಲಿ ನಡೆಯುವ ಸಮೀಕ್ಷೆ ಮಾದಿಗ ಸಮುದಾಯಕ್ಕೆ ಅತ್ಯಂತ ಪ್ರಮುಖವಾಗಿದೆ. ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ನೇರ ನೇಮಕಾತಿ ಮಾಡಿದ ಸಂದರ್ಭದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ನಾನು ನೇಮಕಾತಿಗೊಂಡಿದ್ದೆ. ಅಂದು ನಾನೇ ಮೊದಲು ಮತ್ತು ನಾನೇ ಕೊನೆಯಾಗಿದ್ದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ ಒದಗಿತು ಎಂದರು.

ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಕಲ್ಪಿಸುವುದರಲ್ಲಿ ಹಿಂದೆ ಸರಿಯುವುದಿಲ್ಲ. ಪ.ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ ಕೀರ್ತಿ ಹೊಂದುವರು. ಮುಂದಿನ ಭವಿಷ್ಯಕ್ಕಾಗಿ ಒಳ ಮೀಸಲಾತಿ ಅಗತ್ಯವಿದೆ. ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಆಯೋಗ ರಚಿಸಿದ್ದರಿಂದ ಮಾದಿಗ ಸಮುದಾಯದ ಕಣ್ತೆರೆಸುವಂತೆ ಮಾಡಿದೆ ಎಂದು ಅವರು ಹೇಳಿದರು.

ಮಾಜಿ ಮೇಯರ್‌ ನಾರಾಯಣ ಮಾತನಾಡಿ, ಆದಿದ್ರಾವಿಡ, ಆದಿ ಆಂಧ್ರದವರು ಕರ್ನಾಟಕದ ಮೂಲವಲ್ಲ. ಆದಿ ಕರ್ನಾಟಕದವರು ಕರ್ನಾಟಕದ ನೆಲೆಯವರು. ಪ.ಜಾತಿ ಸಮುದಾಯದಲ್ಲಿ ಈಗ ಹೊಲೆಯರು ಅಂತ ಹಾಗೂ ಮಾದಿಗರು ಎನ್ನುವುದು ಮುಖ್ಯ. ಎಚ್.ಎನ್. ನಾಗಮೋಹನ್ ದಾಸ್ ಒಳ ಮೀಸಲಾತಿ ಕಲ್ಪಿಸಲು ಕೆಲವು ಗೊಂದಲ ಇದೆ. ಆದಿ ಆಂಧ್ರ, ಆದಿ ದ್ರಾವಿಡದಲ್ಲೂ ಮಾದಿಗ ಸೇರಿಕೊಂಡಿರುವ ಕಾರಣ ಮತ್ತೊಮ್ಮೆ ದತ್ತಾಂಶ ಸಂಗ್ರಹಣೆ ಮಾಡುವುದಕ್ಕೆ ಸಮಯ ಕೇಳಿಕೊಂಡಿದ್ದರು. ಅದರಂತೆ, ದತ್ತಾಂಶ ಸಂಗ್ರಹಣೆಗೆ ಸಮೀಕ್ಷೆ ನಡೆಯುತ್ತಿದೆ. ಇದರಿಂದಾಗಿ ಜಾತಿ ವರ್ಗೀಕರಣ ಮಾಡಲು ಸುಲಭವಾಗಲಿದೆ ಎಂದು ಅವರು ಹೇಳಿದರು.

ವಿಚಾರವಾದಿ ಪ್ರೊ.ಎಚ್. ಗೋವಿಂದಯ್ಯ ಮಾತನಾಡಿ, ಒಳ ಮೀಸಲಾತಿ ಕಲ್ಪಿಸಲು ಸಮೀಕ್ಷೆ ನಡೆಸುತ್ತಿರುವ ಕಾರಣ ಯಾವುದೇ ಹಿಂಜರಿಕೆ ಇಲ್ಲದೆ ಮಾದಿಗ ನಮೂದಿಸಬೇಕು. ಇದು ಮುಂದಿನ ತಲೆಮಾರಿನವರಿಗೆ ಅನುಕೂಲವಾಗಲಿದೆ ಎಂದರು.

ಮುಖಂಡರಾದ ಎಡತೊರೆ ನಿಂಗರಾಜು, ಆರ್. ನಾಗರಾಜು, ಮಣಿ, ಹನುಮೇಶ್, ಶ್ರೀನಿವಾಸ್, ಮಾರಯ್ಯ, ಚಿನ್ನಣ್ಣ, ಶ್ರೀನಿವಾಸಮೂರ್ತಿ, ವಕೀಲ ಎಂ. ಶಿವಪ್ರಸಾದ್ ಮೊದಲಾದವರು ಇದ್ದರು.

Share this article