ಕನ್ನಡ ಶಾಲೆ ಉಳಿಸಿ ಬೆಳೆಸಲು ಪ್ರತಿಜ್ಞೆ ಮಾಡಿ: ಎನ್.ರಾಮಕೃಷ್ಣೇಗೌಡ

KannadaprabhaNewsNetwork | Published : May 31, 2024 2:18 AM

ಸಾರಾಂಶ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲು ಅನುದಾನಿತ ಕನ್ನಡ ಶಾಲೆ ತೆರೆಯಲಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ವಿಶೇಷ ಮೀಸಲಾತಿ ಇದೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಇರಲಿದೆ. ಈ ಶಾಲೆಗಳನ್ನು ಉಳಿಸುವುದು ಪ್ರತಿ ಶಿಕ್ಷಕರ ಕರ್ತವ್ಯವಾಗಿದೆ. ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಫಲಿತಾಂಶ ನಿರೀಕ್ಷಿಸಲಾಗುವುದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಾತೃ ಭೂಮಿಯಲ್ಲಿ ಕನ್ನಡ ಶಾಲೆ ಉಳಿಸಿದರೆ ಮಾತ್ರ ಕನ್ನಡ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ಹೋಬಳಿಯ ಆನೆಗೊಳ, ಐಕನಹಳ್ಳಿ ಗ್ರಾಮದಲ್ಲಿನ ಆದಿಚುಂಚನಗಿರಿ ಪ್ರೌಢಶಾಲೆಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಮಠದ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರಿದೆ. ಮಧ್ಯಮ, ರೈತಾಪಿ ವರ್ಗದವರು ಬಲು ಪ್ರೀತಿಯಿಂದ ಪೂಜ್ಯ ಭೈರವೈಕ್ಯರ ಮೇಲೆ ಇಟ್ಟು ಶಾಲೆಗೆ ಸೇರಿಸುತ್ತಾರೆ. ಇವರ ಪ್ರೀತಿಗೆ ವಂಚನೆ ಮಾಡದಂತೆ ಶಿಕ್ಷಕರು ವರ್ತಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲು ಅನುದಾನಿತ ಕನ್ನಡ ಶಾಲೆ ತೆರೆಯಲಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ವಿಶೇಷ ಮೀಸಲಾತಿ ಇದೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಇರಲಿದೆ. ಈ ಶಾಲೆಗಳನ್ನು ಉಳಿಸುವುದು ಪ್ರತಿ ಶಿಕ್ಷಕರ ಕರ್ತವ್ಯವಾಗಿದೆ. ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಫಲಿತಾಂಶ ನಿರೀಕ್ಷಿಸಲಾಗುವುದು ಎಂದರು.

ಶಿಕ್ಷಣಕ್ಕೆ ಪೂರಕವಾದ ಸಮಸ್ಯೆಗಳನ್ನು ಪರಿಹರಿಸಲು ತಾವು ಸದಾ ಬದ್ಧವಿದ್ದು, ಪಠ್ಯದಜೊತೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಪ್ಪದೆ ಶಿಕ್ಷಕರು ಆಯೋಜಿಸಬೇಕು. ಮಕ್ಕಳು ನಲಿನಲಿಯುತ್ತ ಶಾಲೆಗೆ ಬರುವ ವಾತಾವರಣ ನಿರ್ಮಿಸಬೇಕು ಎಂದರು.

ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಮೊದಲು ಆದ್ಯತೆ ನೀಡಲು ಪೋಷಕರ ಮನವೊಲಿಸಬೇಕು. ಶಿಕ್ಷಕರು ಮಕ್ಕಳೊಂದಿಗೆ ಸಭ್ಯತೆಯಿಂದ ವರ್ತಿಸಿ ಬಿಸಿಯೂಟ ಗುಣಮಟ್ಟ ಕಾಪಾಡಿಕೊಳ್ಳಬೇಕು. ಯಾವುದೇರೀತಿ ಸಮಸ್ಯೆಯಾದಲ್ಲಿ ಶಿಕ್ಷಕರು ನೇರಹೊಣೆಯಾಗಬೇಕಾಗಲಿದೆ ಎಂದು ಎಚ್ಚರಿಸಿದರು.

ಈ ವೇಳೆ ಮುಖ್ಯ ಶಿಕ್ಷಕರಾದ ಆನೆಗೊಳ ಪುರುಷೋತ್ತಮ್, ಐಕನಹಳ್ಳಿ ಹನುಮಂತೇಗೌಡ, ಶ್ರೀಧರ್ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಗಳ ಸವಲತ್ತು ಬಳಸಿಕೊಳ್ಳಿ: ಪುಟ್ಟಸ್ವಾಮಿ ಕರೆ

ಹಲಗೂರು:ಸರ್ಕಾರಿ ಶಾಲೆಗಳಲ್ಲಿ ಅನೇಕ ಸವಲತ್ತುಗಳು ದೊರಕುತ್ತಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಿಕ್ಷಕ ಪುಟ್ಟಸ್ವಾಮಿ ಕರೆ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢಶಾಲಾ ವಿಭಾಗದಲ್ಲಿ ಶಾಲಾರಂಭಗೊಂಡ ಹಿನ್ನೆಲೆಯಲ್ಲಿ ಮಾತನಾಡಿ, ನಮ್ಮ ಶಾಲೆಯು ಹಲವು ಸೌಲಭ್ಯಗಳನ್ನು ಹೊಂದಿದೆ. ಸ್ಮಾರ್ಟ್ ಕ್ಲಾಸ್, ವಿಶಾಲ ಆಟದ ಮೈದಾನ, ಉತ್ತಮ ಶಿಕ್ಷಕರು, ಶಾಲಾ ಪ್ರವಾಸ ವ್ಯವಸ್ಥೆ, ಉತ್ತಮ ಕೊಠಡಿಗಳು ಹಾಗೂ 9ನೇ ತರಗತಿಯಿಂದ ವಿಶೇಷ ವೃತ್ತಿ ಕೌಶಲ್ಯ ತರಬೇತಿ ಪ್ರಾರಂಭಿಸಲಾಗಿದೆ ಎಂದರು.ಗ್ರಾಮೀಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ದಾಖಲಾತಿ ಪಡೆದು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಸರ್ಕಾರದಿಂದ ಸಿಗುವ ಬಿಸಿ ಊಟ, ಸೈಕಲ್ ವಿತರಣೆ, ಸಮವಸ್ತ್ರ, ವಿದ್ಯಾರ್ಥಿ ವೇತನ, ಎಲ್ಲಾ ವ್ಯವಸ್ಥೆ ಒಳಗೊಂಡಿದೆ. 8ನೇ ಯಿಂದ ಆಂಗ್ಲ ಮತ್ತು ಕನ್ನಡ ಎರಡು ಮಾಧ್ಯಮಗಳಲ್ಲಿ ತರಗತಿ ಪ್ರಾರಂಭವಾಗಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.ಈ ವೇಳೆ ಉಪ ಪ್ರಾಂಶುಪಾಲರಾದ ಅನುರಾಧ, ಶಿಕ್ಷಕರಾದ ಎನ್.ಪುಟ್ಟಸ್ವಾಮಿಗೌಡ, ಬಿ.ಕೆ.ಕರಿಯಪ್ಪ, ತ್ಯಾಗರಾಜ್, ಕಿರಣ್ ಕುಮಾರ್, ರಶ್ಮಿ, ಸೇರಿದಂತೆ ಇತರ ಶಿಕ್ಷಕರು ಇದ್ದರು.

Share this article