ಬಸವರಾಜ ಹಿರೇಮಠ
ನೂರಾರು ಕಲಾವಿದರನ್ನು ಹುಟ್ಟುಹಾಕಿದ, ಸಾವಿರಾರು ಚಿತ್ರಕಲಾ ಪ್ರದರ್ಶನಕ್ಕೆ ಸಾಕ್ಷಿಯಾದ ಉತ್ತರ ಕರ್ನಾಟಕದ ಏಕೈಕ, ಧಾರವಾಡದಲ್ಲಿ ಇರುವ ಸರ್ಕಾರಿ ಕಲಾ ಶಾಲೆ ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ಸೊರಗುತ್ತಿದೆ.
ಚಿತ್ರ ಕಲಾವಿದರಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ತಮ್ಮ ಚಿತ್ರಕಲೆ ಪ್ರದರ್ಶಿಸಲು ಇರುವ ಏಕೈಕ ಗ್ಯಾಲರಿ ಕಲಾ ಶಾಲೆ ಇದಾಗಿದೆ. ನಿರ್ವಹಣೆ ಕೊರತೆಯಿಂದ ಮಳೆ ನೀರು ಸೋರಿ ಗೋಡೆಗಳು ಬಿರುಕು ಬಿಟ್ಟಿವೆ, ಮೇಲ್ಚಾವಣಿ ಹಸಿರಾಗಿದೆ. 2007ರಲ್ಲಿ ಈ ಗ್ಯಾಲರಿ ನಿರ್ಮಿಸಿದ್ದ ಸರ್ಕಾರ ನಿರ್ವಹಣೆಗೆ ನಯಾಪೈಸೆ ನೀಡುತ್ತಿಲ್ಲ.ಧಾರವಾಡ ಭಾಗದಲ್ಲಿ ಸಂಗೀತಗಾರರು, ಸಾಹಿತಿಗಳು ಇರುವಂತೆ ಚಿತ್ರಕಲಾವಿದರ ಸಂಖ್ಯೆಯೂ ಹೆಚ್ಚು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಇಲ್ಲಿದ್ದು, 1975ರಲ್ಲಿಯೇ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಈ ಸರ್ಕಾರಿ ಕಲಾ ಶಾಲೆ ಆರಂಭಿಸಲಾಗಿದೆ. ಈ ಶಾಲೆಯ ಬಳಿಯೇ ಆರ್ಟ್ ಗ್ಯಾಲರಿ ಸಹ ನಿರ್ಮಿಸಲಾಗಿದೆ. ಆರಂಭದಲ್ಲಿ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದ್ದ ಕಲಾ ಶಾಲೆ ನಂತರ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸದ್ಯ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿ ಸಂದರ್ಭದಲ್ಲಿ ಸುವ್ಯವಸ್ಥಿತವಾಗಿದ್ದ ಕಲಾ ಶಾಲೆ ಇದೀಗ ಅನಾಥ ಭಾವ ಎದುರಿಸುತ್ತಿದೆ.
ಸರ್ಕಾರಿ ಕಲಾ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ನಂತರ ನಾಲ್ಕು ವರ್ಷದ ಬ್ಯಾಚುಲರ್ ಆಫ್ ವಿಸುವಲ್ ಆರ್ಟ್ಸ್ ಕೋರ್ಸ್ ಕಲಿಯುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಸೌಲಭ್ಯಗಳಿಲ್ಲ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಆಡಳಿತ ವ್ಯವಸ್ಥೆ ಗಮನಕ್ಕೆ ತರಲಾಗಿದೆ. ಇಷ್ಟಾಗಿಯೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮಳೆ ಬಂದಾಗ ಗ್ಯಾಲರಿ ಸೋರುತ್ತಿದೆ. ಬಾಡಿಗೆ ಕೊಟ್ಟು ಪ್ರದರ್ಶನ ಹಮ್ಮಿಕೊಂಡ ಕಲಾವಿದರು ಪ್ರಶ್ನಿಸುತ್ತಿದ್ದಾರೆ. ಕಲಾಕೃತಿಗಳಿಗೂ ಧಕ್ಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 2018ರಿಂದ ಗ್ಯಾಲರಿ ಸುಣ್ಣ-ಬಣ್ಣ ಕಂಡಿಲ್ಲ. ವಿದ್ಯುತ್ ಬಿಲ್, ನೀರು, ಇಂಟರ್‌ನೆಟ್ ಬಿಲ್ ತುಂಬಿಲ್ಲ. ಕಲಾ ಶಾಲೆ, ಗ್ಯಾಲರಿ ನಿರ್ವಹಣೆಗೆ ಸಾಕು ಸಾಕಾಗಿ ಹೋಗಿದೆ ಎಂದು ಶಾಲೆಯ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.