ಕೆಪಿಎಸ್ ಹೆಸರಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ

KannadaprabhaNewsNetwork |  
Published : Jun 01, 2026, 01:30 AM IST
ಕೆ ಕೆ ಪಿ ಸುದ್ದಿ 01: ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕನಕಪುರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ನೂರಾರು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುವುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಬಹಳ ವಿಷಾದನೀಯಕರ ಎಂದು ಎಐಡಿಎಸ್‍ಒ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಸಿ.ಎಂ.ಅಪೂರ್ವ ಆರೋಪಿಸಿದರು

ಕನಕಪುರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ನೂರಾರು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುವುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಬಹಳ ವಿಷಾದನೀಯಕರ ಎಂದು ಎಐಡಿಎಸ್‍ಒ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಸಿ.ಎಂ.ಅಪೂರ್ವ ಆರೋಪಿಸಿದರು.

ತಾಲೂಕಿನ ಉಯ್ಯಂಬಳ್ಳಿ ಸರ್ಕಾರಿ ಪಬ್ಲಿಕ್ ಶಾಲಾ ಆವರಣದ ಮುಂಭಾಗದಲ್ಲಿ ನಡೆದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಹೆಗ್ಗನೂರು ಕೆಪಿಎಸ್ ಶಾಲೆಗೆ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಉಯ್ಯಂಬಳ್ಳಿ ಹೋಬಳಿ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಗ್ರಾಮಗಳಾದ ಮಡಿವಾಳ, ಹುಳ್ಯ, ಹೊಸದೊಡ್ಡಿ, ಏಳಗಳ್ಳಿ ಚಿಲ್ಲಂದವಡಿ, ಹೊಡಕೆಕಟ್ಟೆ, ನಲ್ಲಳ್ಳಿದೊಡ್ಡಿ, ಕುಪ್ಪೆದೊಡ್ಡಿ, ಹಾರೊಶಿವನಹಳ್ಳಿ, ಚುಂಚಿ ಕಾಲೋನಿ, ಸಂಗಮ, ಹೆಗ್ಗನೂರುದೊಡ್ಡಿ ಹಾಗೂ ಉಯಂಬಳ್ಳಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರು ನಿರಂತರ ಹೋರಾಟ ನಡೆಸುತ್ತಿದ್ದರೂ ಸಾರ್ವಜನಿಕರ ಯಾವುದೇ ಆಕ್ರೋಶಕ್ಕೂ ಕಿವಿಕೊಡದ ರಾಜ್ಯ ಸರ್ಕಾರ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ನೀಡದೆ ಮುಗ್ಧ ಪೋಷಕರಿಂದ ಸಹಿ ಪಡೆದುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಶಿಕ್ಷಣವನ್ನ ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಸರ್ಕಾರದ ಒಂದು ವ್ಯವಸ್ಥಿತ ಸಂಚಾಗಿದೆ. ಒಂದೇ ಸೂರಿನಡಿ 14 ವರ್ಷಗಳ ಶಿಕ್ಷಣ, ಇಂಗ್ಲಿಷ್ ಮಾಧ್ಯಮ, ಉಚಿತ ಬಸ್ ಸೌಕರ್ಯ ಹಾಗೂ ಒಂದನೇ ತರಗತಿಯಿಂದಲೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುವುದು ಎಂಬ ಸರ್ಕಾರದ ಭರವಸೆಗಳು ಕೇವಲ ಸುಳ್ಳಿನ ಕಂತೆಗಳಾಗಿವೆ. ಈಗಾಗಲೇ ಹೊಂಗನೂರು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಸಂಪೂರ್ಣ ವಿಫಲವಾಗಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಸರ್ಕಾರ ಒಂದು ಕಡೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂದು ಹೇಳಿ ಮತ್ತೊಂದು ಕಡೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಕಳೆದ ಮೇ 26ರಂದು ಎಐಡಿಎಸ್‍ಒ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಪಾದರಹಳ್ಳಿ, ಆವೇರಹಳ್ಳಿ ಮತ್ತು ಜಾಲಮಂಗಲ ವ್ಯಾಪ್ತಿಯ 3 ಕೆಪಿಎಸ್ ಮ್ಯಾಗ್ನೆಟ್ ಕೇಂದ್ರಗಳ ಹೆಸರಿನಲ್ಲಿ ಜಿಲ್ಲೆಯ 40 ಶಾಲೆಗಳನ್ನು ಮುಚ್ಚುವುದರ ವಿರುದ್ಧ ಡಿಡಿಪಿಐ (DDPI) ಕಚೇರಿಗೆ ಬೃಹತ್ ನಿಯೋಗ ಕೊಂಡೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ಹಳ್ಳಿ ಮಟ್ಟದ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಡಿಡಿಪಿಐ ಭರವಸೆ ನೀಡಿದ್ದರು. ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಮಾತ್ರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೊಳಿಸಲು ಹಠಮಾರಿ ಧೋರಣೆ ಪ್ರದರ್ಶಿಸುತ್ತಿರುವುದು ಕಳವಳಕಾರಿ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಉಯ್ಯಂಬಳ್ಳಿ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಇದು ವಿಶಾಲವಾದ ಆವರಣ, ಉತ್ತಮ ಆಟದ ಮೈದಾನ ಹಾಗೂ ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿದೆ. ಈ ಯೋಜನೆಯಿಂದಾಗಿ ಈ ಶಾಲಾ ಮಕ್ಕಳು 7 ಕಿಲೋಮೀಟರ್ ದೂರದ ಅರಣ್ಯದ ನಡುವಿನ ಹೆಗ್ಗನೂರು ಸರ್ಕಾರಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮಸ್ಥರು ಯಾವುದೇ ಪರಿಸ್ಥಿತಿಯಲ್ಲೂ ಶಾಲೆಯ ಬಾಗಿಲುಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ದೃಢವಾಗಿ ನಿರ್ಧರಿಸಿದ್ದು ಸರ್ಕಾರ ಈ ಬಗ್ಗೆ ಗ್ರಾಮಸ್ಥರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಲೋಹಿತ್‌, ಗಿರೀಶ್, ಜಡೆಮಾಡೇಗೌಡ, ರಾಮಕೃಷ್ಣ, ನಾಗಣ್ಣ, ಚಂದ್ರು, ಶಿವಣ್ಣ ಮೂಗೂರು ಗೌಡರು, ಮಹದೇವಸ್ವಾಮಿ ಸೇರಿದಂತೆ ಗ್ರಾಮಸ್ಥರು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೋಟ್‌.......................

ನಮ್ಮ ಶಾಲೆಗೆ ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸವಿದೆ. ನಮ್ಮ ರಕ್ತ-ಬೆವರು ಹರಿಸಿಯಾದರೂ ಸರಿ, ಈ ಶಾಲೆಯನ್ನು ಮುಚ್ಚಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಮ್ಮದೇ ಭಾಗದವರಾದ, ಹೊಸದಾಗಿ ಅಧಿಕಾರ ವಹಿಸಿಕೊಳ್ಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ನಮ್ಮದೊಂದು ಮನವಿ, ದಯವಿಟ್ಟು ಈ ನೀತಿಯನ್ನು ಮರುಪರಿಶೀಲಿಸಿ, ನಮ್ಮ ಶಾಲೆಯನ್ನು ಎಂದಿನಂತೆ ಮುಂದುವರಿಯಲು ಬಿಡಿ.

-ಶಿವಪ್ರಸಾದ್, ಗ್ರಾಮದ ನಿವಾಸಿ

ಕೋಟ್‌.......

ನಮಗೆ ಹೈಟೆಕ್ ಶಾಲೆಗಳೂ ಬೇಡ, ಖಾಸಗಿ ಶೈಲಿಯ ಶಿಕ್ಷಣವೂ ಬೇಡ. ನಮಗೆ ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಷ್ಟೇ. ನಾವೆಲ್ಲಾ ಕೂಲಿ ಕಾರ್ಮಿಕರು, ಬಡ ರೈತರು. ನಮ್ಮ ಮಕ್ಕಳ ಭವಿಷ್ಯವೇ ಈ ಶಾಲೆಗಳು. ನಮಗಿರುವ ಮೂಲಭೂತ ಹಕ್ಕಾದ ಶಿಕ್ಷಣ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ನಮ್ಮಿಂದ ಕಸಿದು ಕೊಳ್ಳಬೇಡಿ.

-ಚಂದ್ರಶೇಖರ್, ಗ್ರಾಮದ ನಿವಾಸಿ

ಕೆ ಕೆ ಪಿ ಸುದ್ದಿ 01:

ಕನಕಪುರ ತಾಲೂಕಿನ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಉಯ್ಯಂಬಳ್ಳಿ ಹೋಬಳಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನ- ಸೋಲಾಪುರ ರೈಲು ನಿಲುಗಡೆಗೆ ಸಚಿವ ಸೋಮಣ್ಣ ಚಾಲನೆ
ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂದ ಶಾಸಕ ಬಾಲಕೃಷ್ಣ