ಕುಕನೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 4,399 ದಿನಗಳನ್ನು ಪೂರೈಸಿ, ನೆಹರು ಅವರ ಸುದೀರ್ಘ ಆಡಳಿತದ ದಾಖಲೆ ಬದಿಗೊತ್ತಿದ್ದಾರೆ. ಅವರಿಂದ ಭಾರತದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಅವರು ಪ್ರತಿಪಾದಿಸುವ ‘ಸ್ವಾವಲಂಬನೆ’ಯು ಕೇವಲ ಆರ್ಥಿಕತೆಗೆ ಸೀಮಿತವಾಗಿರದೆ, ಇಡೀ ದೇಶವನ್ನು ಪ್ರತಿಯೊಂದು ರಂಗದಲ್ಲಿಯೂ ಸ್ವಾವಲಂಬಿಯನ್ನಾಗಿ ಮಾಡುವ ‘ಆತ್ಮನಿರ್ಭರ್ ಭಾರತ್’ ಪರಿಕಲ್ಪನೆಯಾಗಿದೆ. ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯ ಉತ್ಪಾದನೆ, ಕೌಶಲ್ಯ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದು ಪ್ರಧಾನಿ ಮೋದಿ ಅವರ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಭಾರತದ ರಾಷ್ಟ್ರೀಯತೆಯನ್ನು ಪ್ರಧಾನಿ ಮೋದಿ ಅವರು ಎತ್ತಿ ಹಿಡಿಯುತ್ತಾರೆ. ಬಿಜೆಪಿ ತತ್ವ, ಸಿದ್ಧಾಂತ ಸಹ ಭಾರತೀಯ ರಾಷ್ಟ್ರೀಯತೆ ಹಾಗೂ ಭಾರತದ ಸರ್ವತೋಮುಖ ಅಭಿವೃದ್ಧಿ ಆಗಿದೆ. ಇವೆರಡನ್ನು ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಪಾಲನೆ ಮಾಡುತ್ತ ಬಂದಿದ್ದಾರೆ. ಭಾರತಕ್ಕೆ ಸುದೀರ್ಘ ಆಡಳಿತ ನೀಡಿದ ಮೋದಿ ಅವರು ಜನರ ಮನಸ್ಸಿನಲ್ಲಿ ಮನೆ ಮಗನಾಗಿ, ಭಾರತದ ಸೇವಕನಾಗಿ ಒಡಮೂಡಿದ್ದಾರೆ. ಅವರಿಂದ ಭಾರತದಲ್ಲಿ ದಿನ ನಿತ್ಯ ಬದಲಾವಣೆ ಪರ್ವ ಪ್ರಜ್ವಲಿಸುತ್ತಿದೆ ಎಂದು ಹೇಳಿದರು.ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಪ್ರಮುಖರಾದ ಶಿವಕುಮಾರ ನಾಗಲಾಪುರಮಠ, ಶರಣಪ್ಪ ಬಣ್ಣದಬಾವಿ, ಮಂಜುನಾಥ ನಾಡಗೌಡ್ರ, ಬಿಜೆಪಿ ನಗರ ಘಟಕ ಅಧ್ಯಕ್ಷ ಬಸವರಾಜ ಹಾಳಕೇರಿ, ಕರಬಸಯ್ಯ ಬಿನ್ನಾಳ, ತಾಸಿನ್, ಗೋವಿಂದರಾವ ಕುಲಕರ್ಣಿ, ಮುಕುಂದರಾವ ಕುಲಕರ್ಣಿ, ಪಾರ್ವತಿ ಹನಸಿ, ರಾಮನಗೌಡ ಇತರರಿದ್ದರು.