ಕಾಂಗ್ರೆಸ್ಸಿಗರು ತುಕ್ಡೆ ಗ್ಯಾಂಗ್ ಸುಲ್ತಾನರು: ಮೋದಿ ಕಿಡಿ

KannadaprabhaNewsNetwork |  
Published : Apr 15, 2024, 01:17 AM ISTUpdated : Apr 15, 2024, 07:07 AM IST
18 | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಭಾನುವಾರ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರಿನ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಪರ ರೋಡ್‌ಶೋ ನಡೆಸಿ ಮತಯಾಚಿಸಿದರು.

 ಮೈಸೂರು :  ಕಾಂಗ್ರೆಸ್‌ ಪಕ್ಷ ಈ ದೇಶದಲ್ಲಿ ಅವನತಿಯ ತುತ್ತ ತುದಿಯಲ್ಲಿದೆ. ಕಾಂಗ್ರೆಸ್‌ ಜೊತೆಗಿನ ಮೈತ್ರಿಕೂಟ ತುಕಡೆ ಗ್ಯಾಂಗ್‌ನಂತಿದೆ. ಕಾಂಗ್ರೆಸ್ಸಿಗರು ತುಕಡೆ ಗ್ಯಾಂಗ್‌ನ ಸುಲ್ತಾನರು. ಈ ದೇಶವನ್ನು ವಿಭಜಿಸುವ, ದುರ್ಬಲಗೊಳಿಸುವ ಅಪಾಯಕಾರಿ ಮನಸ್ಥಿತಿಯನ್ನು ಪ್ರತಿಪಕ್ಷದ ನಾಯಕರು ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮೋದಿ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ- ಜೆಡಿಎಸ್‌ ಆಯೋಜಿಸಿದ್ದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ವೇದಿಕೆ ಹಂಚಿಕೊಂಡ ಮೋದಿ, ಮೈತ್ರಿಕೂಟದ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದರು.

ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಮೋದಿ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್‌, ಅವನತಿಯ ತುತ್ತ ತುದಿಯಲ್ಲಿದೆ. ಕಾಂಗ್ರೆಸ್‌ ಸಮಾವೇಶಗಳಲ್ಲಿ ‘ಭಾರತ್‌ ಮಾತಾ ಕಿ ಜೈ’ ಎನ್ನಲೂ ಕೂಡ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ. ಇಂತಹ ಪಕ್ಷವನ್ನು ನೀವು ಕ್ಷಮಿಸುತ್ತೀರಾ? ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.

ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ 370ನ್ನು ರದ್ದುಗೊಳಿಸಿದಾಗ ಬೊಬ್ಬೆ ಹೊಡೆದರು. ಸರ್ಜಿಕಲ್‌ ಸ್ಟ್ರೈಕ್‌ ಗೆ ಸಾಕ್ಷಿ ಕೇಳಿ, ನಮ್ಮ ಮೇಲೆ ಪ್ರಹಾರ ನಡೆಸಿದರು. ಅಯೋಧ್ಯೆಯ ಶ್ರೀರಾಮ ಮಂದಿರ ಪ್ರತಿಷ್ಠಾಪನೆಗೆ ಆಹ್ವಾನಿಸಿದರೂ ಕಾರ್ಯಕ್ರಮಕ್ಕೆ ಬಾರದೆ ಅವಮಾನ ಮಾಡಿದರು. ಸನಾತನ ಧರ್ಮದ ವಿನಾಶವೇ ಅವರ ಉದ್ದೇಶ. ಆದರೆ, ಈ ಬಗ್ಗೆ ನೀವು ಹೆದರಬೇಕಿಲ್ಲ. ನಿಮ್ಮ ಜತೆ ಮೋದಿ ಇದ್ದಾನೆ. ನಿಮ್ಮ ಆಶೀರ್ವಾದ ನಮಗೆ ಇರುವವರೆಗೆ ಅವರ ಯಾವ ಯೋಜನೆಯೂ ಸಫಲವಾಗದು ಎಂದರು.

ಬಡವರ ಅಭಿವೃದ್ಧಿ ಕೇವಲ ಮೋದಿ ಗ್ಯಾರಂಟಿಯಿಂದ ಸಾಧ್ಯವೇ ಹೊರತು, ಕಾಂಗ್ರೆಸ್‌ ನಿಂದ ಅಲ್ಲ. ಕಾಂಗ್ರೆಸ್‌ ಈವರೆಗೆ ದೇಶವನ್ನು, ಈ ರಾಜ್ಯವನ್ನು ಲೂಟಿ ಹೊಡೆದಿದೆ. ಕರ್ನಾಟಕದಲ್ಲಿ ಖಜಾನೆ ಖಾಲಿಯಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇನ್ನು ಮುಂದೆ ನಿಲ್ಲಲಿವೆ. ನೀವು ಇಲ್ಲಿ ತೆರಿಗೆ ಕಟ್ಟುತ್ತೀರಿ, ಆದರೆ, ಬೇರೆ ರಾಜ್ಯಕ್ಕೆ ಈಗ ಕರ್ನಾಟಕ ಎಟಿಎಂ ಆಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ 4 ಸಾವಿರ ನೀಡುವುದನ್ನು ನಿಲ್ಲಿಸಿದ್ದಾರೆ. ವಿದ್ಯಾರ್ಥಿ ವೇತನ ನಿಂತಿದೆ. ನೂರಾರು ಕೋಟಿಯಷ್ಟು ಕಪ್ಪು ಹಣವನ್ನು ಕೂಡಿಟ್ಟುಕೊಂಡಿದ್ದಾರೆ. ಐಟಿಯ ಪ್ರಮುಖ ಕೇಂದ್ರವಾದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ