ಕುಮಟಾ: ಸತತ ಹೋರಾಟ, ನಿರಂತರ ಅಧ್ಯಯನ, ಸತ್ಯದ ಹುಡುಕಾಟ, ಭವಿಷ್ಯದ ಚಿಂತನೆಗಳ ಮೂಲಕ ಡಾ. ಅಂಬೇಡ್ಕರ ದೇಶದ ಸಾಮಾಜಿಕ ಹಾಗೂ ರಾಜಕೀಯ ಚಿತ್ರಣವನ್ನು ಆಮೂಲಾಗ್ರವಾಗಿ ಬದಲಿಸಿದ ವಿಶೇಷ ಪಾಂಡಿತ್ಯವುಳ್ಳ ವ್ಯಕ್ತಿ. ಕೇವಲ ಭಾಷಣಗಳಿಗೆ ಸೀಮಿತರಾದವರಲ್ಲ, ತಮ್ಮ ಅಧ್ಯಯನದ ಪ್ರತಿಫಲವನ್ನು ವಿಶ್ವಶ್ರೇಷ್ಠ ಸಂವಿಧಾನದ ಮೂಲಕ ದೇಶಕ್ಕೆ ಕೊಡುಗೆಯಾಗಿ ನೀಡಿದರು ಎಂದು ಪ್ರೊ. ಕೃಷ್ಣನಾಯ್ಕ ತಿಳಿಸಿದರು.
ಬುಡಕಟ್ಟುಗಳ ಒಳಗಿನ ಸಂಘರ್ಷದ ಪ್ರತಿಫಲದ ಸೋಲು- ಗೆಲುವಿನ ಸಂಕೇತವಾಗಿ ಸಮಾಜದಲ್ಲಿ ಮೇಲು- ಕೀಳು ಸೃಷ್ಟಿಯಾಯಿತು ಎಂದರು.
ತಾಪಂ ಇಒ ರಾಜೇಂದ್ರ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ ವ್ಯಕ್ತಿತ್ವ ಹಾಗೂ ಅವರ ಚಿಂತನೆಗಳು ಸದಾ ಅನುಕರಣೀಯ ಎಂದರು.ಉಪವಿಭಾಗಾಧಿಖಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ಟ ಮಾತನಾಡಿ, ಅಂಬೇಡ್ಕರ ದೇಶದ ಶಕ್ತಿ, ದೇಶಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದರು. ಸಂವಿಧಾನ ಪ್ರತಿಯೊಬ್ಬರ ಸುಸ್ಥಿರ ಬದುಕಿಗೆ ದಾರಿ ತೋರಿಸಿಕೊಟ್ಟಿದೆ ಎಂದರು.
ತಹಸೀಲ್ದಾರ್ ಪ್ರವೀಣ ಕರಾಂಡೆ, ಕೃಷ್ಣ ನಾಯ್ಕ ವಿರಚಿತ ಅಂಬೇಡ್ಕರ ಅರಿವು ಎಂಬ ಪುಸ್ತಕ ಬಿಡುಗಡೆಗೊಳಿಸಿ, ಅಂಬೇಡ್ಕರ ಅವರ ಪುಸ್ತಕ ಹಾಗೂ ಶಿಕ್ಷಣಪ್ರೇಮ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಸಮಾಜ ಜಾಗೃತಿಗೆ ಕಾರಣವಾದ ಅಂಬೇಡ್ಕರ ಅವರು ಭಾರತರತ್ನ ಮಾತ್ರವಲ್ಲ ವಿಶ್ವರತ್ನ ಎಂದರು.