ಜನರ ಕಣ್ಣಲ್ಲೇ ನನಗೆ ರಿಸಲ್ಟ್‌ ಕಾಣ್ತಿದೆ: ಮೋದಿ

KannadaprabhaNewsNetwork | Published : Apr 21, 2024 2:17 AM

ಸಾರಾಂಶ

ಲೋಕಸಭೆ ಚುನಾವಣೆ ಕಾವು ಏರಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಏಷ್ಯಾನೆಟ್‌ ನ್ಯೂಸ್‌ ಮಾಧ್ಯಮ ಸಂಸ್ಥೆಗಳಿಗೆ ಎಕ್ಸ್‌ಕ್ಲೂಸಿವ್‌ ಹಾಗೂ ವಿಸ್ತೃತವಾದ ಸಂದರ್ಶನ ನೀಡಿದ್ದಾರೆ. ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಗದ್ದುಗೆಗೆ ಏರುವ ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿರುವ ಅವರು, 10 ವರ್ಷಗಳ ಅವಧಿಯಲ್ಲಿ ಆಗಿರುವ ಹಲವಾರು ಬದಲಾವಣೆಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರಗಳ ಸಮರಕ್ಕೂ ಉತ್ತರ ಕೊಟ್ಟಿದ್ದಾರೆ. ಅದರ ಸಂಕ್ಷಿಪ್ತ ಸ್ವರೂಪ ಇಲ್ಲಿದೆ.

ಮೋದಿಜೀ ನೀವು ತುಂಬಾ ಜಾಗಗಳಲ್ಲಿ ಓಡಾಡಿದ್ದೀರಿ, ಸಭೆ ಮಾಡಿದ್ದೀರಿ, ರ್‍ಯಾಲಿ ಮಾಡಿದ್ದೀರಿ. ನಿಮಗೆ ವಾತಾವರಣ ಹೇಗಿದೆ ಅನಿಸುತ್ತೆ?ಸಾರ್ವಜನಿಕ ಜೀವನದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡಿದ್ದೀನಿ. ವಾತಾವರಣ ನನಗೆ ಅರ್ಥವಾಗುತ್ತೆ. ನಾನು ಜ್ಯೋತಿಷಿ ಅಲ್ಲ. ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಈಗ ನಾನು ಏನು ವಾತಾವರಣ ನಾನು ನೋಡ್ತಿದ್ದೇನೋ ಅದು ಚುನಾವಣೆ ಘೋಷಣೆಯಾದ ಮೇಲೆ ಶುರುವಾಗಿದ್ದಲ್ಲ. ಕಳೆದ 10 ವರ್ಷದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವುದು. ನಾನು ಅವರ ಕಣ್ಣಲ್ಲಿ ಪ್ರೀತಿಯನ್ನು ನೋಡ್ತಿನಿ, ಆಕರ್ಷಣೆಯನ್ನು ನೋಡ್ತೀನಿ ಹಾಗೂ ಅವರ ಕಣ್ಣಲ್ಲಿನ ಜವಾಬ್ದಾರಿ ಸಹ ನೋಡ್ತೀನಿ. ಆ ಜವಾಬ್ದಾರಿ ಹೇಳುತ್ತೆ- ಮೋದಿ ಜೀ ಈ ಚುನಾವಣೆ ನಾವು ಗೆಲ್ಲುತ್ತೇವೆ. ನೀವು ಚಿಂತೆ ಮಾಡಬೇಡಿ. ಶಾಂತವಾಗಿರಿ...ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕೆ ದುರುಪಯೋಗ ಮಾಡಿಕೊಳ್ತಿದ್ದೀರಿ ಎಂದು ವಿಪಕ್ಷದವರು ಹೇಳುತ್ತಾರೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?

ನನಗೆ ಆಶ್ಚರ್ಯವಾಗುತ್ತೆ. ಉದಾಹರಣೆಗೆ ರೈಲ್ವೆ ತೆಗೆದುಕೊಳ್ಳಿ, ರೈಲಿನಲ್ಲಿ ಟಿಕೆಟ್ ಚೆಕ್ ಮಾಡುವ ಒಂದು ಕೆಲಸವಿದೆ. ಅವರ ಬಳಿ ನೀವ್ಯಾಕೆ ಟಿಕೆಟ್ ಚೆಕ್ ಮಾಡ್ತೀರಾ ಅಂದ್ರೆ? ನನ್ನ ಮೇಲೆ ಅನುಮಾನವಿದ್ಯಾ ಅಂದ್ರೆ. ಟಿಕೆಟ್ ಚೆಕ್ ಮಾಡುವವರ ಕೆಲಸ ಟಿಕೆಟ್ ಚೆಕ್ ಮಾಡೋದು. ಇ.ಡಿ ಸ್ಥಾಪನೆ ಮಾಡಿದ್ದು ಯಾಕೆ? ಸಿಬಿಐ ರಚನೆ ಮಾಡಿದ್ದು ಯಾಕೆ? ಅವುಗಳ ಜವಾಬ್ದಾರಿ ಅದು.

ಕರ್ನಾಟಕದಲ್ಲಿ ಬರ ಇದೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಬರ ಪರಿಹಾರ ಬಂದಿಲ್ಲ ಅಂತ ರಿಟ್ ಅರ್ಜಿ ಹಾಕಿದ್ದಾರೆ. ತುಂಬಾ ಚರ್ಚೆ ನಡೀತಿದೆ.. ಏನಾಗಿದೆ?ಇದು ನಮ್ಮ ಸಮಯದಲ್ಲಿ ಅಲ್ಲ. ತುಂಬಾ ಹಿಂದೆಯೇ ಒಂದು ವ್ಯವಸ್ಥೆಯಿಂದ ನಿರ್ಧಾರಿತವಾಗಿದೆ. ಯಾವುದೇ ವಿಪತ್ತನ್ನು ಕೇವಲವಾಗಿ ತೆಗೆದುಕೊಳ್ಳುವಂತಿಲ್ಲ. ಸಮಸ್ಯೆಯನ್ನು ಸಂವೇದನಶೀಲವಾಗಿ, ಗಂಭೀರವಾಗಿ ಪರಿಗಣಿಸಬೇಕು. ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತೆ ಅಂತ ಇರಲೇಬಾರದು. ಬರಗಾಲವಾಗಲೀ, ಅತಿವೃಷ್ಟಿಯಾಗಲಿ ಸಮಸ್ಯೆಯಾಗೋದು ಅಲ್ಲಿನ ಜನಸಾಮಾನ್ಯರಿಗೆ. ನಮ್ಮೆಲ್ಲರ ಜವಾಬ್ದಾರಿ ನಾಗರಿಕರನ್ನು ಕಾಪಾಡುವುದು. ಇದು ರಾಜಕೀಯ ಮಾಡುವ ವಿಷಯವಲ್ಲ. ರಾಜಕೀಯ ಮಾಡಬಾರದು. ಅತ್ಯಂತ ಸಂವೇದನಾಶೀಲ ವಿಚಾರವಿದು.

ಭಾರತ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ನಮಗೆ ಅನುಮತಿ ಕೊಡಿ ಅಂತ. ಆದರೆ ಈಗ ರಾಜಕಾರಣಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕೋದು ಒಂದು ಫ್ಯಾಷನ್ ಆಗಿದೆ. ನಾವು ಕೊಡುವಷ್ಟು ತೆರಿಗೆ ಹಣ ವಾಪಸ್‌ ಬರುತ್ತಿಲ್ಲ, ಇದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರದ ಬಗ್ಗೆ ಯೋಚಿಸಬೇಕಾಗುತ್ತೆಂದು ಕರ್ನಾಟಕ ಸರ್ಕಾರ ಹೇಳುತ್ತಿದೆಯಲ್ಲಾ?ನಾನು ಗುಜರಾತ್‌ನಲ್ಲಿದ್ದಾಗ ಕೇಂದ್ರ ಸರ್ಕಾರದಿಂದ ನನಗೆ ಸಾಕಷ್ಟು ಅನ್ಯಾಯಗಳಾದವು, ಪ್ರತಿಯೊಂದರಲ್ಲೂ ಅನ್ಯಾಯ ಮಾಡಿದರು. ಆದ್ರೆ ನನ್ನದು ಒಂದೇ ಮಂತ್ರ ಇದ್ದಿದ್ದು ಭಾರತದ ವಿಕಾಸಕ್ಕಾಗಿ ಗುಜರಾತಿನ ವಿಕಾಸ. ನಾವೆಲ್ಲಾ ಒಟ್ಟಾಗಿ ದೇಶವನ್ನು ಮುಂದೆ ತರಬೇಕು. ಇದರಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಬಾರದು.

Share this article