ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಧಾನಿ ಮೋದಿ ಸುಳ್ಳಿನ ಸರದಾರ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.ಬುಧವಾರ, ಯಾದಗಿರಿಯ ವನಕೇರಿ ಲೇಔಟಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದರು.
ಮೋದಿ ಕೀ ಗ್ಯಾರಂಟಿ ಇಲ್ಲ, ನಮ್ಮ ಗ್ಯಾರಂಟಿ ಇದೆ. ಮೋದಿ ಸುಳ್ಳು ಭರವಸೆ ನೀಡುತ್ತಿರುತ್ತಾನೆ, ಅದಕ್ಕೇ ಅವನನ್ನು ನಾನು ಸುಳ್ಳಿನ ಸರದಾರ ಎಂದು ಕರೆಯುತ್ತಿರುತ್ತೇನೆ ಎಂದು ಖರ್ಗೆ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪ್ರಧಾನಿ ಮೋದಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಉದ್ಯೋಗ ಕೊಡಿಸದೆ, ಕಾಂಗ್ರೆಸ್, ಗಾಂಧಿ ಮತ್ತು ನನ್ನನ್ನು ಬೈಯೋದು ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಿದರು.
ನನ್ನ ಹೆಸರು ಮಲ್ಲಿಕಾರ್ಜುನ, ಮೈಲಾರ ಲಿಂಗಣ್ಣ ಹೆಸರು ಮೇಲೆ ಇಟ್ಟಿದ್ದಾರೆ, ನಾನೂ ಸಹ ದೇವರನ್ನು ಆರಾಧಿಸುತ್ತೇನೆ ಎಂದರು.ಖರ್ಗೆ ರಾಮ ಮಂದಿರ ಉದ್ಘಾಟನೆಗೆ ಕರೆದರೂ ಬರಲಿಲ್ಲ ಎಂದು ಮೋದಿ ಹೇಳುತ್ತಾರೆ, ಆತನೇನು ಪೂಜಾರಿಯೇ ಎಂದು ಪ್ರಶ್ನಿಸಿದ ಖರ್ಗೆ, ಪಾಪಗಳ ಮಾಡಿ ಅದನ್ನು ಹೋಗಲಾಡಿಸಲು ರಾಮ ಮಂದಿರ ಉದ್ಘಾಟನೆ ಮಾಡಿದ್ದಾನೆ ಎಂದು ವ್ಯಂಗ್ಯವಾಡಿದರು.
ನಾನು ಕಂದಾಯ ಸಚಿವರಾಗಿದ್ದಾಗ ಎಲ್ಲ ಹಳ್ಳಿಗಳಲ್ಲಿ ನೂರಾರು ಆಂಜನೇಯ ದೇವಸ್ಥಾನಗಳನ್ನು ಕಟ್ಟಿಸಿ ಕೊಟ್ಟಿದ್ದೇನೆ. ಮೋದಿ ರಾಮನ ಹೆಸರು ಮೇಲೆ ಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಾಗೆ ನಾನು ಮಾಡಲಿಲ್ಲ. ಮತಗಳಿಗಾಗಿ ನಾನು ಆಂಜನೇಯ ಗುಡಿ ಕಟ್ಟಿಸಿಲ್ಲ ಎಂದರು.ಈ ಭಾಗ ಹಿಂದೂ -ಮುಸ್ಲಿಂ ಸಾಮರಸ್ಯದಿಂದ ಇದೆ. ಮೋದಿ ಅವರು ಹಿಂದೂ ಮುಸ್ಲಿಂ ಜಗಳ ಹಚ್ಚುವ ಕೆಲಸ ಮಾಡುತ್ತಿರುತ್ತಾರೆ. ನಮ್ಮ ಭಾಗದಲ್ಲಿ ಎಷ್ಟು ಜನರ ಹೆಸರು ಮೌಲಾಲಿ, ಫಕೀರಪ್ಪ, ಖಾತಾಲ್, ಲಾಲಾಪ್ಪ, ನವಾಜ್ ಮುಂತಾದ ಮುಸ್ಲಿಂ ದೇವರ ಹೆಸರುಗಳನ್ನು ಹಿಂದೂಗಳಲ್ಲಿ ಇಟ್ಟುಕೊಂಡು ಸಾಮರಸ್ಯ ದಿಂದ ಬಾಳುತ್ತಿದ್ದಾರೆ. ಆದರೆ, ಮೋದಿ ದೇಶದಲ್ಲಿ ಜನರಲ್ಲಿ ಧರ್ಮದ ದ್ವೇಷ ಭಾವನೆ ಉಂಟು ಮಾಡುತ್ತಿದ್ದಾರೆ ಎಂದರು.
ಮಹಿಳೆಯರ ಬಗ್ಗೆ ಅಪಮಾನ ಮಾಡಿದವನ ಜತೆಗೆ ಮೈತ್ರಿ ಮಾಡಿಕೊಂಡು ಟಿಕೆಟ್ ನೀಡಿದಿರಲ್ಲಪ್ಪ ಎಂದು ಸಂಸದ ಪ್ರಜ್ವಲ್ ಬಗ್ಗೆ ಟಾಂಗ್ ನೀಡಿದರು. ಸಂವಿಧಾನ ಉಳಿಸಲು, ಜನರನ್ನು ಉಳಿಸಲು ಕಾಂಗ್ರೆಸ್ ಪಕ್ಷ ಕ್ಕೆ ಮತ ನೀಡಬೇಕು, ಮೋದಿ ಹಠಾವೋ, ದೇಶ್ ಕೋ ಬಚಾವ್ ಆಂದೋಲನ ನಡೆಯಬೇಕಾಗಿದೆ. ಎಲ್ಲ ಧರ್ಮದವರು ಸಮಾನತೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.