ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದಲೇ ಪ್ರಚಾರ ಆರಂಭಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅಲ್ಲಮ ಪ್ರಭು ಮೈದಾನದಲ್ಲಿ ಸುಮಾರು 2.5 ಲಕ್ಷ ರು. ಕುರ್ಚಿಗಳನ್ನು ಹಾಕಬಹುದಾಗಿದೆ. ಉಳಿದಂತೆ ಫ್ರೀಡಂ ಪಾರ್ಕ್‌ನ ಅಕ್ಕಪಕ್ಕ ದೊಡ್ಡ ಎಲ್‌ಇಡಿ ಟೀವಿಗಳನ್ನು ಅಳವಡಿಸಿ ಮೋದಿ ಭಾಷಣವನ್ನು ನೋಡಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ವೇದಿಕೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
10 ವರ್ಷ ಯಶಸ್ವಿ ಆಡಳಿತ ನೀಡಿ ವಿಶ್ವ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿದ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. 3ನೇ ಬಾರಿಗೆ ಎನ್‌ಡಿಎ ನೇತೃತ್ವವಹಿಸಿಕೊಂಡು ಈ ಬಾರಿಯ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಮೋದಿಯೇ ದೊಡ್ಡ ಗ್ಯಾರಂಟಿ ಅವರು ಹಲವು ಗ್ಯಾರಂಟಿಗಳನ್ನು ಈಗಾಗಲೇ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆ, 370ರ ವಿಧಿಯನ್ನು ತೆಗೆದು ಹಾಕಿರುವುದು, ಇಡಿ ದೇಶವನ್ನು ಅಭಿವೃದ್ಧಿಪಡಿಸಿರುವುದು, ಇದೀಗ ಪೌರತ್ವ ಕಾಯ್ದೆ ಜಾರಿ ಮಾಡಿ ಅಲ್ಪಸಂಖ್ಯಾತ ಹಿಂದುಗಳಿಗೆ ಭಾರತದಲ್ಲಿ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜರಿಗೆ ತಂದಿದ್ದಾರೆ. ಆ ಮೂಲಕ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ, 2014ರ ಡಿ.31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಕ್, ಬೌದ್ಧ, ಜೈನ, ಪಾರ್ಸಿ ಹಾಗೂ ಕೈಸ್ತರಿಗೆ ಭಾರತ ಪೌರತ್ವ ನೀಡಬಹುದಾಗಿದ್ದು, ಇದೊಂದು ಮಹತ್ವದ ಹಾದಿಯಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ನವೀನ್, ಶಾಸಕ ಎಸ್.ಎನ್.ಚನ್ನಬಸಪ್ಪ, ಚಂದ್ರಪ್ಪ, ಪ್ರಮುಖರಾದ ಆರ್.ಕೆ.ಸಿದ್ರಾಮಣ್ಣ, ತಿಪ್ಪಾರೆಡ್ಡಿ, ಭಾನುಪ್ರಕಾಶ್, ಮಂಜುಳ, ಭಾರತಿಶೆಟ್ಟಿ, ಎಸ್. ದತ್ತಾತ್ರಿ, ಟಿ.ಡಿ. ಮೇಘರಾಜ್, ಮೋಹನ್‌ರೆಡ್ಡಿ, ಬಸವರಾಜ್ ನಾಯಕ್, ಶಿವಯೋಗಿ ಸ್ವಾಮಿ, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು.