ಕಾಂಗ್ರೆಸ್ ಗ್ಯಾರಂಟಿಗಿಂತ ಪ್ರಧಾನಿ ಮೋದಿ ಗ್ಯಾರಂಟಿ ಮುಖ್ಯ

KannadaprabhaNewsNetwork | Published : Apr 17, 2024 1:19 AM

ಸಾರಾಂಶ

ಕಾಂಗ್ರೆಸ್ ಗ್ಯಾರಂಟಿಗಿಂತ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಮುಖ್ಯ. ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶ ಸೇವೆಗಾಗಿಯೇ ಮುಡುಪಾಗಿರುವ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕು.

ಚಿತ್ರದುರ್ಗ: ಕಾಂಗ್ರೆಸ್ ಗ್ಯಾರಂಟಿಗಿಂತ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಮುಖ್ಯ. ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶ ಸೇವೆಗಾಗಿಯೇ ಮುಡುಪಾಗಿರುವ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕು. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತಗಳಿಂದ ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಡಿ ಎಂದು ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ವಕೀಲರುಗಳಲ್ಲಿ ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮಂಗಳವಾರ ನ್ಯಾಯಾಲಯದಲ್ಲಿ ಮತಯಾಚಿಸಿ ಮಾತನಾಡಿದ ಸುರೇಶ್‍ ಕುಮಾರ್, ಉಕ್ರೇನ್-ರಷ್ಯಾ ನಡುವೆ ಯುದ್ಧ ನಡೆದಾಗ 22 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದು ದಿಟ್ಟತನ ತೋರಿದ ಮೋದಿ ಅವರು ದೇಶಕ್ಕೆ ಸಿಕ್ಕಿರುವುದು ಪುಣ್ಯ. ಕೋವಿಡ್‍ನಲ್ಲಿ ಉಚಿತ ಲಸಿಕೆ ಕೊಡಿಸಿದ್ದರಿಂದ ಭಾರತದಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ. ನಾನು ಕಾನೂನು ಸಚಿವನಾಗಿದ್ದಾಗ ವಕೀಲರು, ವೈದ್ಯರ ಮೇಲೆ ಹಲ್ಲೆಯಾಗಬಾರದು ಅದಕ್ಕಾಗಿ ರಕ್ಷಣೆ ಕೊಡುವ ಕಾಯ್ದೆ ಜಾರಿಗೆ ತಂದಿದ್ದೆ. ರಾಜಕಾರಣಿಗಳಾದವರು ಯಾರನ್ನು ಏಕವಚನದಲ್ಲಿ ಮಾತನಾಡಿಸಬಾರದು. ದೇಶ ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಚುನಾವಣೆ ಇದಾಗಿರುವುದರಿಂದ ವಕೀಲರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಸುರೇಶ್‍ ಕುಮಾರ್ ವಿನಂತಿಸಿದರು.ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಸರ್ಕಾರಕ್ಕೆ ಒಳ್ಳೆಯ ಕೀರ್ತಿ ಬರಬಹುದು. ಕೆಟ್ಟ ಹೆಸರು ಬರಬಹುದು. ಭಾರತ ಬಲಿಷ್ಟ ದೇಶವಾಗಬೇಕಾದರೆ 26ರಂದು ನಡೆಯುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಬಹುಮತಗಳಿಂದ ಗೆಲ್ಲಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೈಜೋಡಿಸಿ ಎಂದು ವಕೀರು ಕೋರಿದರು.

ಮಾಡನಾಯಕನಹಳ್ಳಿ ಕೆ.ಎನ್.ರಾಜಣ್ಣ ಮಾತನಾಡಿ, ಸರಳ, ಸಜ್ಜನಿಕೆಯ ಗೋವಿಂದ ಕಾರಜೋಳ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಟ್ಟರೆ ಜಿಲ್ಲೆಗೆ ಗೌರವ ತರುತ್ತಾರೆ. ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಹೀಗೆ ವಿವಿಧ ಇಲಾಖೆಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿರುವ ಕಾರಜೋಳ ಅನುಭವಿ ರಾಜಕಾರಣಿ. ಎಲ್ಲರೂ ಅವರಿಗೆ ಮತ ನೀಡಿ ಗೆಲ್ಲಿಸೋಣ ಎಂದು ಹೇಳಿದರು.

ಬಿಜೆಪಿ ಕಾನೂನು ವಿಭಾಗದ ಅಧ್ಯಕ್ಷ ವಸಂತಕುಮಾರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಅನಿಲ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನ್ಯಾಯವಾದಿ ಪ್ರತಾಪ್‍ ಜೋಗಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಬೆಳಗಟ್ಟ ಸೇರಿದಂತೆ ನೂರಾರು ವಕೀಲರುಗಳು ಇದ್ದರು.

Share this article