ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕುಂಚಿಟಿಗ ಒಕ್ಕಲಿಗರನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವ ಸಂಬಂಧ,ಈಗಾಗಲೇ ಕರ್ನಾಟಕ ರಾಜ್ಯ ಸರಕಾರ ಕಳುಹಿಸಿರುವ ಶಿಫಾರಸ್ಸನ್ನು ಜಾರಿಗೆ ತರಲು ಕೇಂದ್ರ ಸರಕಾರದ ಜೊತೆ ಮಾತುಕತೆ ನಡೆಸಲು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರೊಂದಿಗೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಚರ್ಚೆ ನಡೆಸಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೂಚನೆಯ ಮೇರೆಗೆ ಅವರನ್ನು ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಖಂಡರೊಂದಿಗೆ ಭೇಟಿಯಾಗಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿದ ಮುರುಳೀಧರ ಹಾಲಪ್ಪ, ಮಾರ್ಚ್ 8 ರಂದು ಈಗಾಗಲೇ ಪ್ರಧಾನ ಮಂತ್ರಿಗಳ ಭೇಟಿಗೆ ಸಮಯ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ, ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಕೇಂದ್ರ ಓಬಿಸಿ ಜಾತಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಲಾಗುವುದು ಎಂದರು.ಕುಂಚಿಟಿಗ ಒಕ್ಕಲಿಗರನ್ನು ಹೊರತು ಪಡಿಸಿ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಇತರೆ ಎಲ್ಲಾ ಉಪ ಪಂಗಡಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಓಬಿಸಿ ಜಾತಿಪಟ್ಟಿಯಲ್ಲಿವೆ. ರಾಜ್ಯದ ಸುಮಾರು 17 ಜಿಲ್ಲೆಗಳ 37 ತಾಲೂಕುಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುಂಚಿಟಿಗ ಸಮುದಾಯ ಮುಖ್ಯಕಸುಬು ವ್ಯವಸಾಯ ಮತ್ತು ಪಶುಸಂಗೋಪನೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ,ತುಮಕೂರು, ರಾಮನಗರ, ಮೈಸೂರು, ಹಾವೇರಿ, ಶಿವಮೊಗ್ಗ, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಕಾರವಾರ,ಚಿತ್ರದುರ್ಗ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ಕುಂಚಿಟಿಗ ಸಮುದಾಯದ ಜನರು ಇದ್ದಾರೆ. ಉಳಿದೆಲ್ಲಾ ರಾಜ್ಯಗಳಲ್ಲಿ ಕುಂಚಿಟಿಗ ಸಮುದಾಯ ಕೇಂದ್ರ ಒಬಿಸಿ ಪಟ್ಟಿಯಲ್ಲಿದ್ದರೆ, ಕರ್ನಾಟಕದ ಕುಂಚಿಟಿಗರನ್ನು ಮಾತ್ರ ಕೇಂದ್ರ ಓಬಿಸಿ ಪಟ್ಟಿಯಿಂದ ಕೈಬಿಡಲಾಗಿದೆ.ಈ ಅಸಮತೋಲನ ವನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ಜನಾಂಗದ ಮುಖಂಡರಿಂದಲೂ, ರಾಜ್ಯ ಸರಕಾರದಿಂದಲೂ ನಡೆದಿದೆ.ಕೇಂದ್ರ ಓಬಿಸಿ ಪಟ್ಟಿಯಲ್ಲಿ ಕುಂಚಿಟಿಗ ಸಮುದಾಯ ಸೇರ್ಪಡೆಗೊಂಡರೆ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಜನಾಂಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ.ಕೇಂದ್ರ ಸರಕಾರದ ಎಲ್ಲಾ ಹುದ್ದೆಗಳಲ್ಲಿ ಮೀಸಲಾತಿ ದೊರೆಯಲಿದೆ.ರಾಜ್ಯ ಸರಕಾರದ ಶಿಫಾರಸ್ಸನ್ನು ಒಪ್ಪಿಕೊಂಡು ಜಾರಿಗೆ ತರುವ ನಿಟ್ಟಿನಲ್ಲಿ ಅನುಸರಿಸಬೇಕಾ ಕ್ರಮಗಳ ಕುರಿತು ಹಿರಿಯರು, ಮುತ್ಸದ್ದಿ ರಾಜಕಾರಣಿಯಾ ಎಚ್.ಡಿ.ದೇವೇಗೌಡರು ಸುದೀರ್ಘ ಚರ್ಚೆ ನಡೆಸಿದ್ದು,ದಿ. ೮ರ ಶನಿವಾರ ಕುಂಚಿಟಿಗ ಸಮುದಾಯದ ಮುಖಂಡರು ದೆಹಲಿಗೆ ಬರುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ, ಕುಲಶಾಸ್ತ್ರಿಯ ಅಧ್ಯಯವನ್ನು ಪರಾಮರ್ಶಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ರಾಜ್ಯ ಸರಕಾರಕ್ಕೂ ಕೃತಜ್ಞತೆ ಸಲ್ಲಿಸುವುದಾಗಿ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.