ರಫೀಕ ಕಲೇಗಾರ
"ಸೋರುತಿಹುದು ಶಾಲೆಯ ಮಾಳಿಗೆ " ಎಂಬಂತಾಗಿದೆ ಪಟ್ಟಣದ ನವಲಗುಂದ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಸ್ಥಿತಿ.
ಪಿಎಂ ಶ್ರೀ ಶಾಲೆಯಾಗಿ ಮೇಲ್ದರ್ಜೆಗೇರಿರುವ ಈ ಶಾಲೆಯ 19 ಕೊಠಡಿಗಳ ಪೈಕಿ 14 ಕೊಠಡಿಗಳ ಚಾವಣಿಯ ಹಂಚುಗಳು ಅಲ್ಲಲ್ಲಿ ಒಡೆದು ಹೋಗಿದ್ದು, ಮಳೆ ಬಂದಾಗ ತರಗತಿ ಕೊಠಡಿಗಳಿಗೆ ನೀರು ಸೋರಿಕೆಯಾಗುತ್ತಿದೆ. ಕೆಲವೆಡೆ ಒಡೆದ ಹಂಚಿನ ಜಾಗಕ್ಕೆ ಬ್ಯಾನರ್‌ಗಳನ್ನು ಹೊದಿಸಿರುವುದು ಶಾಲೆಯ ದುಸ್ಥಿತಿಗೆ ಸಾಕ್ಷಿಯಾಗಿದೆ.1956ರ ಆ. 17ರಂದು ಕನ್ನಡ ಪ್ರಾಥಮಿಕ ಹಿರಿಯ ಹೆಣ್ಣುಮಕ್ಕಳ ಶಾಲೆಯಾಗಿ ಆರಂಭವಾದ ಈ ಶಾಲೆ ಆರು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ. ಆದರೆ, ಕಟ್ಟಡದ ಚಾವಣಿ ಸೇರಿದಂತೆ ಮೂಲಸೌಕರ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬಂದಿಲ್ಲ ಎಂಬುದು ಸ್ಥಳೀಯರ ಆರೋಪ.
2024-25ನೇ ಸಾಲಿನಲ್ಲಿ ತಾಲೂಕಿನ ಮೂರು ಪಿಎಂ ಶ್ರೀಶಾಲೆಗಳ ಪೈಕಿ ಅಣ್ಣಿಗೇರಿ ಶಾಲೆಯೂ ಆಯ್ಕೆಯಾಗಿದೆ. ಪ್ರಸ್ತುತ ಎಲ್‌ಕೆಜಿಯಿಂದ 7ನೇ ತರಗತಿ ವರೆಗೆ 224 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಶೇ. 80ರಷ್ಟು ಫಲಿತಾಂಶ ದಾಖಲಿಸಿರುವ ಶಾಲೆಯಲ್ಲಿ ಮುಂದಿನ ಹಂತದಲ್ಲಿ 8ರಿಂದ 10ನೇ ತರಗತಿ ವರೆಗೆ ತರಗತಿಗಳನ್ನು ಆರಂಭಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಕಟ್ಟಡದ ದುರಸ್ತಿ ತುರ್ತಾಗಿ ಕೈಗೊಳ್ಳಬೇಕಿದೆ.
ಕೆಲವು ಕೊಠಡಿಗಳ ಚಾವಣಿ ಹಾಗೂ ಕಂಬಗಳು ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಆತಂಕದಲ್ಲೇ ತರಗತಿ ನಡೆಸುವ ಪರಿಸ್ಥಿತಿ ಇದೆ. ಶಾಲೆ ಪಿಎಂ ಶ್ರೀಯಿಂದ ಮುಂದಿನ ಹಂತದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಯಾಗುವ ನಿರೀಕ್ಷೆಯಿರುವುದರಿಂದ, ಅದಕ್ಕೂ ಮುನ್ನ ಕಟ್ಟಡದ ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಸದಸ್ಯರು ಆಗ್ರಹಿಸಿದ್ದಾರೆ.
ಶಾಲೆಯ ಹಲವು ಕೊಠಡಿಗಳ ಹೆಂಚು ಒಡೆದು ಹೋಗಿವೆ. ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ದಿನಗಳಲ್ಲೇ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಯಶವಂತ ನಾಗರಡ್ಡಿ ಒತ್ತಾಯಿಸಿದ್ದಾರೆ.ಶಾಲೆಯ ಚಾವಣಿ ಕಾಮಗಾರಿಗೆ ಜಿಪಂ ಹಾಗೂ ತಾಪಂಯಿಂದ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ವಿಶೇಷ ಅನುದಾನದಡಿ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.