ಆಹಾರ ಸಂಸ್ಕರಣೆ, ಸಿರಿಧಾನ್ಯ ಉದ್ಯಮ ಉತ್ತೇಜಿಸಲು ಪಿಎಂಎಫ್‌ಎಂಇ ಸಹಕಾರಿ

KannadaprabhaNewsNetwork |  
Published : Sep 11, 2025, 12:03 AM ISTUpdated : Sep 11, 2025, 12:04 AM IST
10ಕೆಪಿಎಲ್ 25 ಪಿಎಂಎಫ್ಎಂಇ ಅರಿವು ಕುರಿತು ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಪಿಎಂಎಫ್‌ಎಂಇ ಯೋಜನೆಯಾಗಿದ್ದು, ಇದು ಆಹಾರ ಸಂಸ್ಕರಣಾ ಉದ್ಯಮದಲ್ಲಿನ ಅಸಂಘಟಿತ ಸೂಕ್ಷ್ಮ ಉದ್ಯಮಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ ಹೊಂದಿದೆ

ಕೊಪ್ಪಳ:

ಆತ್ಮನಿರ್ಭರ ಯೋಜನೆಯಡಿ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಅಡಿಯಲ್ಲಿ ಆಹಾರ ಸಂಸ್ಕರಣಾ ಮತ್ತು ಸಿರಿಧಾನ್ಯ ಉದ್ಯಮ ಉತ್ತೇಜಿಸಲು ಸಹಕಾರಿ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದ್ದಾರೆ.

ಪಿಎಂಎಫ್ಎಂಇ ಅರಿವು ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಭಾಗವಹಿಸಿ ಅವರು ಮಾತನಾಡಿದರು. ಸೆ. 18ರಂದು ಆಡಿಟೋರಿಯಂ ಹಾಲ್‌ನಲ್ಲಿ ಪಿಎಂಎಫ್‌ಎಂಇ ಯೋಜನೆ ಬಗ್ಗೆ ನಡೆಯುವ, ಜಿಲ್ಲೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು. ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಇದು ಆಹಾರ ಸಂಸ್ಕರಣಾ ಉದ್ಯಮದಲ್ಲಿನ ಅಸಂಘಟಿತ ಸೂಕ್ಷ್ಮ ಉದ್ಯಮಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ ಹೊಂದಿದೆ ಎಂದರು.

ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಉನ್ನತೀಕರಿಸಲು ಹಣಕಾಸು, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲ ಒದಗಿಸುತ್ತದೆ. ಈ ಯೋಜನೆಯಡಿ ಶೇ. ೫೦ರಷ್ಟು ಅಥವಾ ಗರಿಷ್ಠ ₹೧೫ ಲಕ್ಷ ಸಹಾಯಧನ ಒದಗಿಸಲಾಗುತ್ತದೆ. ಅದು ಕೇಂದ್ರ ಸರ್ಕಾರದ ₹೬ ಲಕ್ಷ (ಶೇ. ೪೦) ಹಾಗೂ ರಾಜ್ಯ ಸರ್ಕಾರದ ₹೯ ಲಕ್ಷ (ಶೇ. ೬೦) ಸಹಾಯಧನ ಒಳಗೊಂಡಿರುತ್ತದೆ. ಈ ಯೋಜನೆಯು, ಹಣಕಾಸು, ತಾಂತ್ರಿಕ ಮತ್ತು ವ್ಯಾಪಾರಕ್ಕೆ ಬೆಂಬಲ ನೀಡುತ್ತದೆ. ಯೋಜನೆಯಡಿ ಸ್ಥಾಪಿಸಬಹುದಾದ ಆಹಾರ ಸಂಸ್ಕರಣಾ ಉದ್ದಿಮೆಗಳು-ಸಿರಿಧಾನ್ಯಗಳ ಮತ್ತು ಇತರ ಧಾನ್ಯಗಳ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ಡ್ ಆಯಿಲ್, ಮೆಣಸಿನಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಮಸಾಲಾ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು, ವಿವಿಧ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳು ಇತ್ಯಾದಿ ಒಳಗೊಂಡಿದ್ದು, ಈ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಯೋಜನೆಯಡಿ ವೈಯಕ್ತಿಕ ಉದ್ಯಮಗಳು, ಪ್ರೈವೇಟ್ ಲಿಮಿಟೆಡ್ ಕಂಪನಿಗಳು, ಮಾಲೀಕತ್ವದ ಸಂಸ್ಥೆಗಳು, ಪಾಲುದಾರಿಕೆ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಅರ್ಹರಿರುತ್ತಾರೆ ಎಂದರು.

ಇದುವರೆಗೂ ಒಟ್ಟು ೪೨೭ ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ ೧೮೮ ಅರ್ಜಿಗಳು ಫಲಾನುಭವಿಗಳಿಗೆ ವಿಲೇವಾರಿಯಾಗಿರುತ್ತವೆ. ೧೯೪ ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕರಿಸಲ್ಪಟ್ಟಿರುತ್ತವೆ. ಉಳಿದಂತೆ ೪೫ ಅರ್ಜಿಗಳು ಸಾಲ ಮಂಜೂರಾತಿಗೆ ಬ್ಯಾಂಕನಲ್ಲಿ ಪ್ರಕ್ರಿಯೆಯಲ್ಲಿರುತ್ತವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ರುದ್ರೇಶಪ್ಪ ಮಾಹಿತಿ ನೀಡಿದರು.

ಜಿಪಂ ಸಿಇಒ ವರ್ಣಿತ ನೆಗಿ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!