ದಾಂಡೇಲಿ: ಕವಿಯಾಗಿ, ಪ್ರಕಾಶಕರಾಗಿ, ಪತ್ರಕರ್ತರಾಗಿ, ಸಂಘಟಕರಾಗಿ, ಹೋರಾಟಗಾರರಾಗಿ, ರಾಜಕಾರಣಿಯಾಗಿ, ಶಿಕ್ಷಣ ತಜ್ಞರಾಗಿ ಹಲವಾರು ಬಹುಮುಖಿ ಕೆಲಸಗಳೊಂದಿಗೆ ತೊಡಗಿಸಿಕೊಂಡಿದ್ದ ದಿನಕರ ದೇಸಾಯಿ ಅವರದ್ದು ಜೀವಪರ ವ್ಯಕ್ತಿತ್ವವಾಗಿತ್ತು. ಜಿಲ್ಲೆಯ ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದು ದಾಂಡೇಲಿಯ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ ನುಡಿದರು.
ಅವರು ದಾಂಡೇಲಿ ತಾಲೂಕು ಕಸಾಪ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಜನ್ಮ ದಿನಾಚರಣೆ ಅಂಗವಾಗಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ದಿನಕರ ದೇಸಾಯಿಯವರ ಬದುಕು- ಬರಹ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.ಅಂಕೋಲಾದ ಅಲಗೇರಿ ಎಂಬ ಕುಗ್ರಾಮದಲ್ಲಿ ಹುಟ್ಟಿ ಮುಂಬೈನ ಸರ್ವೆಂಟ್ ಆಫ್ ಇಂಡಿಯಾದ ಸದಸ್ಯರಾಗುವ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಹೋರಾಟವನ್ನು ಜಿಲ್ಲೆಯಲ್ಲಿ ಆರಂಭಿಸಿ ದಿನಕರ ದೇಸಾಯಿ ಗುರುತಿಸಿಕೊಂಡವರು. ಕೆನರಾ ವೆಲ್ಪರ್ ಟ್ರಸ್ಟನ್ನು ಆರಂಭಿಸಿ, ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಜನತಾ ವಿದ್ಯಾಲಯಗಳನ್ನು ಪ್ರಾರಂಭಿಸಿ ಗ್ರಾಮೀಣ ಮಕ್ಕಳಿಗೂ ಶೈಕ್ಷಣಿಕ ಅವಕಾಶ ನೀಡಿದವರು ಎಂದರು.
ಕಾರ್ಯಕ್ರಮದ ದಾಸೋಹಿ ಉಪನ್ಯಾಸಕಿ ನಿರೂಪಮಾ ನಾಯಕ ಮಾತನಾಡಿ, ನಾವೆಲ್ಲ ದಿನಕರ ದೇಸಾಯಿ ಕಟ್ಟಿ ಬೆಳೆಸಿದ ಕೆನರಾ ವೆಲ್ಫೇರ್ ಟ್ರಸ್ಟಿನ ವಿದ್ಯಾರ್ಥಿಗಳು ಎಂಬುದೇ ನಮಗೆ ಹೆಮ್ಮೆಯ ಸಂಗತಿ. ದಿನಕರರ ಬದುಕಿನ ಸಂದೇಶಗಳೇ ನಮಗೆಲ್ಲರಿಗೂ ಸ್ಫೂರ್ತಿ. ದಿನಕರರು ಜಿಲ್ಲೆಯ ಸೂರ್ಯನಂತೆ ಬೆಳಗಿದವರು ಎಂದರು.ಜಿಲ್ಲಾ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ದಿನಕರವರ ಕುರಿತಾಗಿ ಬರದ ಚುಟುಕುಗಳನ್ನು ವಾಚಿಸಿದರು. ಮುಖ್ಯ ಅತಿಥಿಗಳಾಗಿದ್ದ ಸುಭಾಷ್ ನಾಯಕ, ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಡಿಗೇರ ಮಾತನಾಡಿದರು. ದಾಂಡೇಲಿ ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ಕಾರ್ಯಕ್ರಮ ಸಂಘಟನೆಗೆ ನೆರವಾಗುವ ದಾಸೋಹಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷ ಬಿ. ಎನ್. ವಾಸರೆ, ಜಿಲ್ಲೆಯಲ್ಲಿ ದಿನಕರ ಉದಯಿಸದೇ ಇದ್ದರೆ ಈ ಜಿಲ್ಲೆಯ ಶೈಕ್ಷಣಿಕ ಸ್ಥಿತಿ ಹೇಗಿರುತ್ತಿತ್ತು ಎನ್ನುವುದನ್ನು ವಹಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ದಿನಕರರು ತಮ್ಮ ಚುಟುಕುಗಳ ಮೂಲಕ ಕವಿತೆಗಳ ಮೂಲಕ ಸಮತೆ, ಸೌಹಾರ್ದ ಪ್ರೀತಿ ಸಾರಿದವರು. ಮೌಢ್ಯಗಳನ್ನು ವಿರೋಧಿಸಿದವರು. ಹರಿಗೆ ಎಂದು ಗುಡಿಯನೊಂದ ಕಟ್ಟುತ್ತಿರುವೆಯಾ, ದೀನಗಿಂತ ದೇವ ಬಡವನೆಂದು ಬಗೆದೆಯಾ ಎಂದು ಪ್ರಶ್ನಿಸಿದ ದಿನಕರರು ಭಗವಂತ ವಿಶ್ವವ್ಯಾಪಿಯಾಗಿರುವಾಗ ಆ ವಿಶ್ವಕ್ಕೆ ಗೋಡೆ ಹಾಕಿ ಗುಡಿ ಕಟ್ಟಬಲ್ಲೆಯಾ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದವರು. ಅವರ ಚುಟುಕುಗಳ ಓದು ಇಂದಿನ ಅಗತ್ಯ ಎಂದರು.ಕಾರ್ಯಕ್ರಮಲ್ಲಿ ಪುಟಾಣಿಗಳಾದ ಬೇನಿಶಾ ನಾಯ್ಕ, ಅಥರ್ವ ಹೆಗಡೆ, ಆಧ್ಯಾ ನಾಯ್ಕ, ಸಾಹಿತ್ಯ ನಾಯ್ಕ ಚುಟುಕು ವಾಚನ, ಗಾಯನ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಕಿಶೋರ ಕಿಂದಳ್ಕರ, ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮತಿಯಾ ಕೌಸರ್, ರಾಜೀವ ಗಾಂಧಿ ಪ್ರಶಸ್ತಿ ಪುರಸ್ಕೃತ ಆಪ್ರಿನ ಸಯ್ಯದ್ ಅವರನ್ನು ಸನ್ಮಾನಿಸಿದರು.
ಕಸಾಪ ತಾಲೂಕು ಘಟಕದ ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ಸ್ವಾಗತಿಸಿದರು. ಸದಸ್ಯ ಸುರೇಶ ಪಾಲನಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೆಂಕಮ್ಮ ನಾಯಕ ವಂದಿಸಿದರು. ಶೋಭಾ ಮುದ್ದಪ್ಪನವರ ನಿರೂಪಿಸಿದರು. ದಾಸೋಹಿ ಬಸವರಾಜ ಕುಡವಕ್ಕಲ, ಸದಸ್ಯರಾದ ನಾಗೇಶ ನಾಯ್ಕ, ಆಶಾ ದೇಶಭಂಡಾರಿ ಸಹಕರಿಸಿದರು.