ಕನ್ನಡಪ್ರಭ ವಾರ್ತೆ ಶನಿವಾರಸಂತೆ ಅರಣ್ಯ ಇಲಾಖೆ ಸಿಬ್ಬಂದಿ ವಾಹನದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಅರಣ್ಯದಲ್ಲಿ ಬೇಟೆಯಾಡುತ್ತಿದ್ದ ಆರೋಪಿಗಳು ಇಲಾಖೆ ವಾಹನದ ಮೇಲೆ ಗುಂಡು ಹಾರಿಸಿದ ಘಟನೆ ಬುಧವಾರ ರಾತ್ರಿ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಬಳಿಕ ಕಾರ್ಯಾಚರಣೆಗಿಳಿದ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ರಾತ್ರಿ ಸೋಮವಾರಪೇಟೆ ಅರಣ್ಯ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಎಂದಿನಂತೆ ವಾಹನದಲ್ಲಿ ರಾತ್ರಿ ಸಂಚಾರ ಗಸ್ತಿನಲ್ಲಿದ್ದಾಗ ಶನಿವಾರಸಂತೆ-ಕುಶಾಲನಗರ ಮುಖ್ಯ ರಸ್ತೆಯಲ್ಲಿರುವ ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯ ಭುವಂಗಾಲ ಬಳಿ ಅರಣ್ಯ ಅಂಚಿನಲ್ಲಿ ಕಾಡಿನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಬಂದ ಆರೋಪಿಗಳು ವಾಹನ ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ವಾಹನ ನಿಲ್ಲಿಸಿದಾಗ ಆರೋಪಿಗಳು ಅರಣ್ಯ ಇಲಾಖೆ ವಾಹನದ ಮೇಲೆ ಗುಂಡು ಹಾರಿಸಿ, ಶನಿವಾರಸಂತೆ ಕಡೆಗೆ ಪರಾರಿಯಾಗಿದ್ದಾರೆ. ತಕ್ಷಣ ಇಲಾಖೆ ಸಿಬ್ಬಂದಿ ವಾಹನದಲ್ಲಿ ಆರೋಪಿಗಳ ವಾಹನವನ್ನು ಹಿಂಬಾಲಿಸಿದ್ದಾರೆ. ಇಲಾಖೆ ಸಿಬ್ಬಂದಿ ಸುಮಾರು 6 ಕಿ.ಮೀ. ವರೆಗೆ ಆರೋಪಿಗಳ ವಾಹನವನ್ನು ಹಿಂಬಾಲಿಸಿದ್ದು, ಈ ವೇಳೆ ಸೋಮವಾರಪೇಟೆ ಅರಣ್ಯ ಇಲಾಖೆ ಸಿಬ್ಬಂದಿ, ಶನಿವಾರಸಂತೆ ಅರಣ್ಯ ವಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶನಿವಾರಸಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗಿಳಿದರು. ಈ ಸಂದರ್ಭ ಮುಳ್ಳೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಆರೋಪಿಗಳ ವಾಹನ ಪಲ್ಟಿಯಾಯಿತು. ಈ ವೇಳೆಗಾಗಲೇ ಹಿಂಬಾಲಿಸುತ್ತಿದ್ದ ಸೋಮವಾರಪೇಟೆ ಅರಣ್ಯ ಇಲಾಖೆ ವಾಹನ ಮತ್ತು ಶನಿವಾರಸಂತೆ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ತಲುಪಿದರು. ಮುಗುಚಿದ ವಾಹನದಿಂದ ಎದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಾಹನದಲ್ಲಿ ಬೇಟೆಯಾಡಲು ಬಂದ ನಾಲ್ವರು ಆರೋಪಿಗಳ ಪೈಕಿ ಚೌಡ್ಲು ಗ್ರಾಮದ ರಾಜಶೇಖರ್, ಕೆಂಚಮನಬಾಣೆಯ ಧನು ಎಂಬವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಪೈಕಿ ಆರೋಪಿ ಧನು ಘಟನೆ ಸ್ಥಳದ ಪಕ್ಕ ಕಾಫಿತೋಟವೊಂದರಲ್ಲಿ ಅವಿತುಕೊಂಡಿದ್ದ. ಈತನನ್ನು ಗುರುವಾರ ಮಧ್ಯಾಹ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಉಳಿದ 2 ಆರೋಪಿಗಳು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ್, ವಿಕಾಸ್, ವಾಹನ ಚಾಲಕ ಸಂತೋಷ್, ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿ ಮಧು, ಚಾಲಕ ಹರೀಶ್ ಭಾಗವಹಿಸಿದ್ದರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.