ಬಳ್ಳಾರಿ: ಬ್ಯಾನರ್ ಗಲಭೆ ಖಂಡಿಸಿ ನಗರದ ಎಪಿಎಂಸಿ ಬಳಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶ ವೇಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿಯ ಹೆಸರನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಇಲ್ಲಿನ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ನಗರದ ಮಹಿಳಾ ಠಾಣೆಯಲ್ಲಿ ಶ್ರೀರಾಮುಲು ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ನಗರ ನಿವಾಸಿ ಬಾಲಕಿಯೊಬ್ಬಳಿಗೆ ಸಿಗರೇಟು, ಗಾಂಜಾ ಸೇದಿಸಿ ಮೂವರು ಯುವಕರು ಲೈಂಗಿಕ ಕಿರುಕುಳ ನೀಡಿ ಮಾನಸಿಕ ತೊಂದರೆ ನೀಡಿದ ಬಗ್ಗೆ ಯುವಕರ ವಿರುದ್ಧ ಬಾಲಕಿಯ ತಾಯಿ 2025ರ ಸೆಪ್ಟಂಬರ್ 19ರಂದು ನೀಡಿದ ದೂರಿನ ಮೇರೆಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ ಪ್ರಕರಣ ದಾಖಲಾಗಿತ್ತು. ಈ ಕುರಿತು ಬಿಜೆಪಿ ಪ್ರತಿಭಟನಾ ಸಮಾವೇಶದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಬಾಲಕಿಯ ಹೆಸರು, ಜನಾಂಗ ಹಾಗೂ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ಹೆಸರು ಪ್ರಸ್ತಾಪಿಸಿದ್ದರು.