ಮಗುವಿನ ‘ಸುಪರ್ದಿ’ಗಾಗಿ ಪೋಕ್ಸೋ ಕೇಸ್‌!

KannadaprabhaNewsNetwork |  
Published : Sep 14, 2026, 02:15 AM IST
ಪೋಕ್ಸೋ  | Kannada Prabha

ಸಾರಾಂಶ

ಮಕ್ಕಳ ಭೇಟಿ, ಸುಪರ್ದಿ ಮತ್ತು ಪಾಲನೆ ಹಕ್ಕಿಗೆ ಸಂಬಂಧಿಸಿದ ಕೌಟುಂಬಿಕ ವ್ಯಾಜ್ಯಗಳಲ್ಲಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ) ಕಾಯ್ದೆಯನ್ನು ಎಳೆದು ತರಲಾಗುತ್ತಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು:

ಮಕ್ಕಳ ಭೇಟಿ, ಸುಪರ್ದಿ ಮತ್ತು ಪಾಲನೆ ಹಕ್ಕಿಗೆ ಸಂಬಂಧಿಸಿದ ಕೌಟುಂಬಿಕ ವ್ಯಾಜ್ಯಗಳಲ್ಲಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ) ಕಾಯ್ದೆಯನ್ನು ಎಳೆದು ತರಲಾಗುತ್ತಿದೆ. ಮಗು ಹೆಣ್ಣಾಗಿದ್ದರೆ ತಂದೆ ಮೇಲೆ, ಮಗು ಗಂಡಾಗಿದ್ದರೆ ತಾಯಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತಿರುವುದು ನಾಯಿಕೊಡೆಯಂತೆ ಹೆಚ್ಚಾಗುತ್ತಿದೆ. ಮಕ್ಕಳನ್ನೇ ಬಳಸಿಕೊಂಡು ತಮ್ಮ ಅಹಂ ತೃಪ್ತಿಪಡಿಸಿಕೊಳ್ಳಲು ಪತಿ-ಪತ್ನಿ ಪರಸ್ಪರ ಕಾನೂನು ಹೋರಾಟ ನಡೆಸುತ್ತಾ ಮಕ್ಕಳ ಮನಸ್ಸು ಕೊಲ್ಲುತ್ತಿದ್ದಾರೆ!

ಹೀಗೆಂದು ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತೀವ್ರ ಅಸಮಾಧಾನ, ವಿಷಾದದಿಂದ ಹೇಳಿದರು.

ನ್ಯಾಯಾಲಯದ ಆದೇಶದಂತೆ ಮೂರು ವರ್ಷದ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾಗ ಬಟ್ಟೆ ಕಳಚಿ, ಗುಪ್ತಾಂಗ ಮುಟ್ಟಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ವ್ಯಕ್ತಿಯೊಬ್ಬರು (ಮಗುವಿನ ತಂದೆ) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ರೀತಿ ಮಾರ್ಮಿಕವಾಗಿ ನುಡಿಯಿತು. ಆ ಮೂಲಕ ಮಕ್ಕಳನ್ನು ಬಳಸಿಕೊಂಡು ನ್ಯಾಯಾಲಯದಲ್ಲಿ ಪರಸ್ಪರ ಹೋರಾಟ ನಡೆಸುವ ಪತಿ-ಪತ್ನಿಯ ಧೋರಣೆ ಖಂಡಿಸಿತು.

ಅರ್ಜಿದಾರರ ಪರ ವಕೀಲರು, ಹೆತ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅರ್ಜಿದಾರರ ಮೇಲೆ ಆತನ ಪತ್ನಿ (ಮಗುವಿನ ತಾಯಿ) ದೂರು ದಾಖಲಿಸಿದ್ದಾರೆ. ತಂದೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಗಳು ತಾಯಿಗೆ ಹೇಳಿದ ಬಗ್ಗೆ ದೂರಿನಲ್ಲಿ ಒಂದು ಪದ ಸಹ ಉಲ್ಲೇಖವಾಗಿಲ್ಲ. ತಂದೆಯು ಮಗಳನ್ನು ಭೇಟಿ ಮಾಡಿದ ನಂತರದ ಎರಡನೇ ದಿನಕ್ಕೆ ಈ ದೂರು ದಾಖಲಾಗಿದೆ. ಮಗುವಿನ ವೈದ್ಯಕೀಯ ಪರೀಕ್ಷೆ, ಅದರೊಂದಿಗೆ ಸಮಾಲೋಚನೆ ನಡೆಸಿದ ಸ್ತ್ರೀರೋಗ ಮತ್ತು ಮಕ್ಕಳ ತಜ್ಞರು ನೀಡಿದ ವರದಿಯಲ್ಲಿ ಮಗುವಿಗೆ ಅಲರ್ಜಿಯಿದೆ ಎಂದು ಹೇಳಿಸಿದ್ದಾರೆ. ಆ ಅಲರ್ಜಿಯನ್ನು ಪೋಕ್ಸೋ ಕಾಯ್ದೆಯಡಿ ಅಪರಾಧವಾಗಿ ಪರಿವರ್ತಿಸಲಾಗಿದೆ ಎಂದರು.

ದೈಹಿಕ ಹಲ್ಲೆ ಉಲ್ಲೇಖ-ತಾಯಿ ಪರ ವಕೀಲರು:

ಮಗುವಿನ ತಾಯಿ ಪರ ವಕೀಲರು, ತಂದೆ ಕೃತ್ಯದ ಬಗ್ಗೆ ಪೊಲೀಸರು ಮತ್ತು ನ್ಯಾಯಾಲಯದ ಮುಂದೆ ಮಗು ಹೇಳಿಕೆ ದಾಖಲಿಸಿದೆ. ಆ ವೇಳೆ ತಾಯಿ ಹಾಜರಿದ್ದರು. ಈ ರೀತಿ ಹೇಳಲು ಮಗಳಿಗೆ ತಾಯಿ ನೀಡಿರಬಹುದು. ಮಗಳು ಏನೂ ಹೇಳಿಲ್ಲ. ಮಗಳು ಹಾಗೆಯೇ ಹೇಳುವಂತೆ ತಾಯಿ ಮಾಡಿದ್ದಾರೆ ಎಂದು ತಂದೆ ಮೊದಲನಿಂದಲೂ ಆರೋಪಿಸುತ್ತಿದ್ದಾರೆ. ತಂದೆಯಿಂದ ಮಗಳ ಲೈಂಗಿಕ ಕಿರುಕುಳ ಹಾಗೂ ದೈಹಿಕ ಹಲ್ಲೆಗೆ ಒಳಗಾಗಿರುವ ಸಾಧ್ಯತೆಯಿದೆ ಎಂಬುದಾಗಿ ವೈದ್ಯರು ಉಲ್ಲೇಖಿಸಿದ್ದಾರೆ ಎಂದರು.

ಆ ವಾದ ಒಪ್ಪದ ನ್ಯಾಯಮೂರ್ತಿಗಳು, ವೈದ್ಯರ ವರದಿಯಲ್ಲಿ ದೈಹಿಕ ಹಲ್ಲೆ ಎಂಬ ಪದ ನಾನು ನೋಡಿಲ್ಲ. ಮಗುವಿಗೆ ಗಾಯವಾಗಿರುವುದಕ್ಕೆ ಪರಚು/ಗೀಚುವಿಕೆ ಕಾರಣವಾಗಿದೆ ಎಂದು ವೈದ್ಯರು ಉಲ್ಲೇಖಿಸಿದ್ದಾರೆ. ಅದು ಬೇರೆ, ಹಲ್ಲೆ ಬೇರೆ. ಎರಡಕ್ಕೂ ವ್ಯತ್ಯಾಸವಿದೆ. ಭೇಟಿಯ ಹಕ್ಕು ಮೊಟಕುಗೊಳಿಸಲು ಮೂರು ವರ್ಷದ ಮಗಳನ್ನು ಬಳಕೆ ಮಾಡಲಾಗಿದೆ ಎಂಬುದು ಆಘಾತ ಮೂಡಿಸಿದೆ. ತಂದೆ ತನ್ನ ಮಗಳನ್ನು ಎರಡು ಸಾರಿ ಭೇಟಿಯಾದ ಬಳಿಕ ಈ ದೂರು ದಾಖಲಾಗಿದೆ. ಯಾವ ಹಂತಕ್ಕೆ ಯೋಚಿಸಲಾಗುತ್ತಿದೆ. ನಾಲ್ಕೈದು ಬಾರಿ ಮಗಳ ಭೇಟಿಗೆ ತಂದೆಗೆ ಅನುಮತಿಸಲಾಗಿತ್ತು. ಪ್ರತಿ ಬಾರಿಯೂ ಮಗು ತಂದೆ ವಿರುದ್ಧ ಹಲವು ಆರೋಪ ಮಾಡಿದ್ದಾರೆ ಎಂದು ಹೇಳುವುದಾದರೆ ತಂದೆಯ ಸುಪರ್ದಿಗೆ ಮಗಳನ್ನು ತಾಯಿ ಏಕೆ ನೀಡಬೇಕಿತ್ತು. ಕೋರ್ಟ್‌ ಮುಂದೆ ತಂದೆಯ ವರ್ತನೆ ಬಗ್ಗೆ ಹೇಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದರು.

ಮಗುವಿನ ಮಾನಸಿಕ ಸ್ಥಿತಿ ಮೇಲೆ ಆಘಾತ:

ತಂದೆ-ತಾಯಿಯ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಕೌಟುಂಬಿಕ ವ್ಯಾಜ್ಯಗಳಿಗೂ ಪೋಕ್ಸೋ ಕಾಯ್ದೆ ಎಳೆದು ತರಲಾಗುತ್ತಿದೆ. ಮಗು ಹೆಣ್ಣಾದರೆ ತಂದೆ ಮೇಲೆ, ಮಗು ಗಂಡಾದರೆ ತಾಯಿ ಮೇಲೆ ಲೈಂಗಿಕ ಕಿರುಕುಳ ಕೇಸ್‌ ದಾಖಲಿಸಿ ಮಗುವನ್ನು ಆಘಾತಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾರೆ. ಇದು ಮಗುವಿನ ಮಾಸಿಕ ಸ್ಥಿತಿ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತದೆ. ಈಗ ಮಗು ಸಣ್ಣದು. ಏನೂ ಗೊತ್ತಾಗುವುದಿಲ್ಲ. ದೊಡ್ಡವರಾದ ನಂತರ ತನಗಾಗಿ ತಂದೆ-ತಾಯಿ ಪರಸ್ಪರ ಇಂತಹ ಆರೋಪ ಮಾಡಿರುವುದು ತಿಳಿದಾಗ, ಪೋಷಕರೇ ನಾಚಿಕೆ ಪಡಬೇಕೇ ಹೊರತು ಮತ್ಯಾರೂ ಅಲ್ಲ. ಪೋಷಕರಿಗೆ ಇದು ಅರ್ಥವಾಗುತ್ತಿಲ್ಲ ಎಂದು ನೊಂದು ನುಡಿದ ನ್ಯಾಯಮೂರ್ತಿಗಳು ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧವೇಕೆ
ಗಜಮುಖನ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು!